ನವದೆಹಲಿ, ಆ.01(Daijiworld News/SS): ರಸ್ತೆ ಸಂಚಾರ ನಿಯಮ ಉಲ್ಲಂಘನೆಗೆ ಕಠಿಣ ಕ್ರಮ ಕೈಗೊಳ್ಳಲು ಅವಕಾಶ ನೀಡುವ ಮೋಟಾರು ವಾಹನ ಕಾಯ್ದೆ ತಿದ್ದುಪಡಿಗೆ ರಾಜ್ಯಸಭೆಯಲ್ಲಿ ಸಮ್ಮತಿ ದೊರೆತಿದೆ.
ಮೋಟಾರು ವಾಹನ (ತಿದ್ದುಪತಿ) ಮಸೂದೆ 2019 ರಾಜ್ಯಸಭೆಯಲ್ಲಿ ಅಂಗೀಕಾರಗೊಂಡಿದೆ. ರಸ್ತೆ ಮತ್ತು ಹೆದ್ದಾರಿ ಖಾತೆ ಸಚಿವ ನಿತಿನ್ ಗಡ್ಕರಿ ಮಂಡಿಸಿದ ಮಸೂದೆ ಪರ 108 ಹಾಗೂ ವಿರುದ್ಧ 13 ಮತಗಳು ಬಿದ್ದು, ಮಸೂದೆ ಅಂಗೀಕರಿಸಲ್ಪಟ್ಟಿತು. 2017ರಲ್ಲೇ ಪರಿಚಯಿಸಲಾಗಿದ್ದ ಈ ಮಸೂದೆ ಲೋಕಸಭೆಯಲ್ಲಿ ಜುಲೈ 23ರಂದೇ ಅಂಗೀಕಾರವಾಗಿತ್ತು. ಆದರೆ, ರಾಜ್ಯಸಭೆಯಲ್ಲಿ ಈ ಮಸೂದೆ ಅಂಗೀಕಾರಗೊಳ್ಳದ ಕಾರಣ 16ನೇ ಲೋಕಸಭೆಯಲ್ಲಿ ಈ ಮಸೂದೆ ಮೂಲೆ ಸೇರಿತ್ತು.
ಮೋಟಾರು ವಾಹನ ಅಪಘಾತಕ್ಕೆ ಸಂಬಂಧಿತ ಕೇಸ್'ಗಳಲ್ಲಿ ಮೃತರಾದವರಿಗೆ 5 ಲಕ್ಷ ಹಾಗೂ ತೀವ್ರವಾಗಿ ಗಾಯಗೊಂಡವರಿಗೆ 2.5 ಲಕ್ಷ ರೂಪಾಯಿ ಪರಿಹಾರ ಸೇರಿದಂತೆ ಟ್ರಾಫಿಕ್ ಸಂಬಂಧಿತ ಅಪರಾಧಗಳಲ್ಲಿ ಹೆಚ್ಚಿನ ದಂಡ ಜೊತೆಗೆ ಕಠಿಣ ಶಿಕ್ಷೆಗೆ ಗುರಿಪಡಿಸಲಾಗುತ್ತದೆ.
ಈಗಾಗಲೇ ಲೋಕಸಭೆ ಅನುಮತಿ ನೀಡಿರುವ ಈ ಕಾಯ್ದೆ ಶೀಘ್ರವೇ ರಾಷ್ಟ್ರಪತಿ ಅಂಕಿತಕ್ಕೆ ಹೋಗಲಿದೆ. ಈ ಕಾನೂನು ಜಾರಿಯಾದ ಬಳಿಕ ರಸ್ತೆ ಸಂಚಾರ ನಿಯಮ ಉಲ್ಲಂಘಿಸಿದರೆ ವಾಹನ ಸವಾರರು, ಕಠಿಣ ಶಿಕ್ಷೆ ಹಾಗೂ ಭಾರಿ ಪ್ರಮಾಣದ ದಂಡ ತೆರಬೇಕಾಗುತ್ತದೆ. ಸಂಚಾರ ನಿಯಮ ಉಲ್ಲಂಘನೆಗೆ ಕನಿಷ್ಠ ದಂಡ 1 ಸಾವಿರ ರೂ. ಆಗಲಿದ್ದು, 1 ಲಕ್ಷ ರೂ.ಗಳವರೆಗೂ ದಂಡ ವಿಧಿಸಲು ಅವಕಾಶವಿದೆ. ಅಪ್ರಾಪ್ತರು ವಾಹನ ಚಾಲನೆ ಮಾಡಿ ಸಿಕ್ಕಿಬಿದ್ದರೆ ಅವರ ಪಾಲಕರಿಗೆ ದಂಡ ವಿಧಿಸಲಾಗುತ್ತದೆ.