ಕೊಯಮತ್ತೂರು, ಆ 1 (Daijiworld News/RD): ಇಶಾ ಪ್ರತಿಷ್ಠಾನದ ಸ್ಥಾಪಕ ಸದ್ಗುರು ಜಗ್ಗಿ ವಾಸುದೇವ್ ಅವರು ಕಾವೇರಿ ನದಿಯ ರಕ್ಷಣೆ, ಸ್ವಚ್ಛತೆ ಕುರಿತಾದ ಜಾಗೃತಿಗಾಗಿ ’ಕಾವೇರಿ ಕಾಲಿಂಗ್’ ಅಭಿಯಾನಕ್ಕೆ ಚಾಲನೆ ನೀಡಿದರು. ತಮಿಳುನಾಡಿನ ವೆಲ್ಲಿಯಾಂಗಿರಿ ಬೆಟ್ಟಗಳ ಸಾಲಿನ ಕೆಳಗಿರುವ 112 ಅಡಿ ಎತ್ತರದ ವಿಶ್ವವಿಖ್ಯಾತ ಈಶ್ವರನ ಬಳಿಯಿಂದ ಈ ಒಂದು ಜಾಗೃತಿಯನ್ನು ಹಮ್ಮಿಕೊಂಡಿದ್ದಾರೆ.
ತಮಿಳುನಾಡು ಹಾಗೂ ಕರ್ನಾಟಕ ಸೇರಿದಂತೆ 28 ಜಿಲ್ಲೆಗಳಲ್ಲಿ ಈ ಜಾಗೃತಿ ರ್ಯಾಲಿ ಸಂಚರಿಸಲಿದೆ. ಕಾವೇರಿ ನದಿ ತೀರದ ರೈತರಿಗಾಗಿ ಈ ರ್ಯಾಲಿಯನ್ನು ಹಮ್ಮಿಕೊಂಡಿದ್ದು, ನದಿ ತೀರದಲ್ಲಿನ ಮಣ್ಣಿನ ಸತ್ವ ಹೆಚ್ಚಳ, ಮರಗಳನ್ನು ಬೆಳೆಸುವುದು, ಅಂತರ್ಜಲ ಹೆಚ್ಚಳದ ಕುರಿತು ಜಾಗೃತಿಯಲ್ಲಿ ಮಾಹಿತಿ ನೀಡಲಾಗುವುದು. ಸುಮಾರು 282 ಕೋಟಿ ಮರಗಳನ್ನು ಕಾವೇರಿ ನದಿ ತೀರದಾದ್ಯಂತ ಬೆಳೆಸಿ ಅದನ್ನು ಉಳಿಸುವಂತೆ ರೈತರಿಗೆ ಮತ್ತು ಸ್ಥಳೀಯರಿಗೆ ಕಾವೇರಿ ಕಾಲಿಂಗ್ ಅಭಿಯಾನದಲ್ಲಿ ಉತ್ತೇಜಿಸಲಿದೆ. ಅಭಿಯಾನದ ಭಾಗವಾಗಿ ಸದ್ಗುರು ಸೆಪ್ಟೆಂಬರ್ನಲ್ಲಿ ತಲಕಾವೇರಿಯಿಂದ ಬೈಕ್ ರ್ಯಾಲಿಯನ್ನು ಹಮ್ಮಿಕೊಂಡಿದ್ದಾರೆ.
ತಮಿಳುನಾಡು ಬಿಜೆಪಿ ಪ್ರಧಾನ ಕಾರ್ಯದರ್ಶಿ ವಾನಾತಿ ಶ್ರೀನಿವಾಸನ್, ಪೀಪಲ್ಸ್ ನ್ಯಾಷನಲ್ ಪಾರ್ಟಿ ಆಫ್ ಕೊಂಗುನಾಡು ಕಾರ್ಯದರ್ಶಿ ಇಇಆರ್ ಈಶ್ವರನ್ , ನಟಿ ರಾಧಿಕಾ ಶರತ್ಕುಮಾರ್ ಈ ಒಂದು ಜಾಗೃತಿ ಅಭಿಯಾನದಲ್ಲಿ ಪಾಲ್ಗೊಂಡಿದ್ದರು.
ಸದ್ಗುರು ಜಗ್ಗಿ ವಾಸುದೇವ್ ಈಗಾಗಲೇ ನದಿಗಳನ್ನು ಉಳಿಸುವ ದೃಷ್ಠಿಯಿಂದ ರ್ಯಾಲಿ ಫಾರ್ ರಿವರ್ ಜಾಗೃತಿ ಅಭಿಯಾನವನ್ನು ಹಮ್ಮಿಕೊಳ್ಳುವ ಮೂಲಕ ದೇಶದಲ್ಲಿ ಸಂಚಲನ ಮೂಡಿಸಿ, ಅತೀ ಹೆಚ್ಚು ಜನ ಪಾಲ್ಗೊಳ್ಳವಂತೆ ಮಾಡಿ ಯಶಸ್ವಿಯಾಗಿದ್ದಾರೆ.