ನವದೆಹಲಿ, ಆ.01(Daijiworld News/SS): "ಆಹಾರಕ್ಕೆ ಯಾವುದೇ ಧರ್ಮವಿಲ್ಲ, ಆಹಾರವೇ ಧರ್ಮ" ಎಂದು ಗ್ರಾಹಕನೋರ್ವನಿಗೆ ಝೊಮ್ಯಾಟೋ ಕೊಟ್ಟ ಖಡಕ್ ಪ್ರತಿಕ್ರಿಯೆಗೆ ನೆಟ್ಟಿಗರು ಫುಲ್ ಖುಷ್ ಆಗಿದ್ದಾರೆ.
ಡೆಲಿವರಿ ಬಾಯ್ ಹಿಂದುವಲ್ಲ ಎಂಬುದು ತಿಳಿಯುತ್ತಿದ್ದಂತೆಯೇ ತಾನು ಬುಕ್ ಮಾಡಿದ್ದ ಆರ್ಡರ್ ಅನ್ನು ಕ್ಯಾನ್ಸಲ್ ಮಾಡಿದ ವ್ಯಕ್ತಿಯೊಬ್ಬರಿಗೆ ಜನಪ್ರಿಯ ಫುಡ್ ಡೆಲಿವರಿ ಆ್ಯಪ್ ಝೊಮ್ಯಾಟೋ ಮುಖಭಂಗವಾಗುವಂಥ ಉತ್ತರ ನೀಡಿದೆ. "ಆಹಾರಕ್ಕೆ ಧರ್ಮವಿಲ್ಲ, ಆಹಾರವೇ ಒಂದು ಧರ್ಮ" ಎಂದು ಝೊಮ್ಯಾಟೋ ಇಂಡಿಯಾ ತನ್ನ ಟ್ವಿಟ್ಟರ್ ಖಾತೆಯಲ್ಲಿ ಟ್ವೀಟ್ ಮಾಡಿದೆ. ಈ ಖಡಕ್ ಪ್ರತಿಕ್ರಿಯೆಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಮಧ್ಯಪ್ರದೇಶದ ಜಬಲ್ಪುರ ಎಂಬ ಪ್ರದೇಶದ ಅಮಿತ್ ಶುಕ್ಲಾ ಎಂಬ ವ್ಯಕ್ತಿಯೊಬ್ಬ ಝೊಮ್ಯಾಟೋ ದಿಂದ ತಿಂಡಿಯನ್ನು ಆರ್ಡರ್ ಮಾಡಿದ್ದರು. ಆದರೆ ತಮಗೆ ಅದನ್ನು ತಂದು ಕೊಡುತ್ತಿರುವ ವ್ಯಕ್ತಿ ಹಿಂದು ಮತದವನಲ್ಲ, ಅನ್ಯ ಮತೀಯ ಎಂಮಬುದು ತಿಳಿಯುತ್ತಿದ್ದಂತೆಯೇ ಶುಕ್ಲಾ ಆ ಆರ್ಡರ್ ಅನ್ನು ಕ್ಯಾನ್ಸಲ್ ಮಾಡಿದರು.
ಕ್ಯಾನ್ಸಲ್ ಮಾಡುವ ಮುನ್ನ "ಡೆಲಿವರಿ ಬಾಯ್ ಅನ್ನು ಬದಲಾಯಿಸಿ, ಬೇರೆಯವರನ್ನು ಕಳಿಸಿಕೊಡಿ" ಎಂದು ಶುಕ್ಲಾ ಕೇಳಿದ್ದರು. ಅದಕ್ಕೆ ಝೊಮ್ಯಾಟೋ ಒಪ್ಪಿರಲಿಲ್ಲ. ಆದ್ದರಿಂದ ತಮನೆ ಅನ್ಯಮತೀಯರ ಆಹಾರ ತಂದುಕೊಂದುವುದು ಬೇಡ ಎಂದು ಆರ್ಡರ್ ಕ್ಯಾನ್ಸಲ್ ಮಾಡಿದರು. ಆದರೆ ಕ್ಯಾನ್ಸಲ್ ಮಾಡಿದ್ದಕ್ಕಾಗಿ ತಾವು ಆ ಹಣವನ್ನು ಮರುಪಾವತಿ ಮಾಡುವುದಿಲ್ಲ ಎಂದು ಝೊಮ್ಯಾಟೋ ಸ್ಪಷ್ಟಪಡಿಸಿತು.
'ನಾನು ರೈಡರ್ ಅನ್ನು ಬದಲಾಯಿಸಲು ಹೇಳಿದ್ದೆ ಅಷ್ಟೇ' ಎಂದು ಶುಕ್ಲಾ ತಮ್ಮ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ. ಆದರೆ ಟ್ವಿಟ್ಟರ್ ನಲ್ಲಿ ನೇರವಾಗಿಯೇ ಅವರು, "ಡೆಲಿವರಿ ಬಾಯ್ ಅನ್ಯಮತೀಯರಾಗಿದ್ದ ಕಾರಣಕ್ಕೆ ನಾನು ಆರ್ಡರ್ ಕ್ಯಾನ್ಸಲ್ ಮಾಡಿದೆ" ಎಂದು ಶುಕ್ಲಾ ಹೇಳಿಕೊಂಡಿದ್ದರು.
ಝೊಮ್ಯಾಟೋ ಇದಕ್ಕೆ "ಆಹಾರಕ್ಕೆ ಧರ್ಮವಿಲ್ಲ. ಆಹಾರವೇ ಧರ್ಮ" ಎಂದು ಉತ್ತರಿಸಿದೆ. ಮಾತ್ರವಲ್ಲ, ಝೊಮ್ಯಾಟೋ ಸಂಸ್ಥಾಪಕ ದೀಪೀಂದರ್ ಗೋಯಲ್ ಅವರು ಸಹ ಈ ಘಟನೆಗೆ ಪ್ರತಿಕ್ರಿಯೆ ನೀಡಿದ್ದು, "ನಾವು ಭಾರತ ಎಂಬ ಪರಿಕಲ್ಪನೆಯ ಬಗ್ಗೆ ಹೆಮ್ಮೆ ಹೊಂದಿದ್ದೇವೆ. ಹಾಗೆಯೇ ನಮ್ಮ ಪಾಲುದಾರರು ಮತ್ತು ಗ್ರಾಹಕರ ವೈವಿಧ್ಯತೆಯ ಬಗ್ಗೆಯೂ ನಮಗೆ ಗೌರವವಿದೆ. ಆದರೆ ನಮ್ಮ ಮೌಲ್ಯಗಳನ್ನು ಮರೆಮಾಚುವಂಥ ಯಾವುದೇ ವ್ಯವಹಾರವನ್ನೂ ಕೈಚೆಲ್ಲಲು ನಾವು ಯೋಚಿಸುವುದಿಲ್ಲ. ಅದಕ್ಕಾಗಿ ನಮಗೆ ಪಶ್ಚಾತಾಪವಿಲ್ಲ" ಎಂದು ಟ್ವೀಟ್ ಮಾಡಿದ್ದಾರೆ.