ತ್ರಿಶ್ಯೂರ್ , ಆ 1 (Daijiworld News/MSP): ಎರಡು ವರ್ಷಗಳ ಹಿಂದೆ, 2017 ರಲ್ಲಿ ಉಗ್ರ ಸಂಘಟನೆ ಐಸಿಎಸ್ ಸೇರಲೆಂದು ಅಫ್ಘಾನಿಸ್ಥಾನಕ್ಕೆ ತೆರಳಿದ್ದ 31 ಜನರ ಪೈಕಿ ಮಲಪ್ಪುರಂ ನ ಮೊಹಮ್ಮದ್ ಮುಹಾಸಿನ್ , ಅಮೇರಿಕಾ ನಡೆಸಿದ ಡ್ರೋನ್ ದಾಳಿಯಿಂದ ಸಾವನ್ನಪ್ಪಿದ್ದಾನೆ ಎಂದು ತಿಳಿದುಬಂದಿದೆ. ಈ ಕುರಿತು ಮೊಹಮ್ಮದ್ ಕುಟುಂಬ ಸದಸ್ಯರಿಗೆ ವಾಟ್ಯಾಪ್ಸ್ ನಲ್ಲಿ ಸಂದೇಶ ತಲುಪಿದ್ದು, 10 ದಿನಗಳ ಹಿಂದೆಯೇ ಮುಹಾಸಿನ್ ಮೃತಪಟ್ಟಿದ್ದಾನೆ ಎಂದು ಹೇಳಲಾಗಿದೆ.
ಸಾಂದರ್ಭಿಕ ಚಿತ್ರ
ಈ ಸಂಬಂಧ ಪೊಲೀಸರು ತನಿಖೆ ನಡೆಸಿದ್ದು, ಮೇಲ್ನೋಟಕ್ಕೆ ಈ ಸಂದೇಶದಲ್ಲಿ ಸತ್ಯವಿದೆ ಎಂದು ಮೂಲಗಳು ತಿಳಿಸಿವೆ. ತ್ರಿಶ್ಯೂರ್ ನಲ್ಲಿ ಎಂಜಿಯರಿಂಗ್ ಕಾಲೇಜಿನಲ್ಲಿ ಅಂತಿಮ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದ ಮೊಹಮ್ಮದ್ ತಾನು ಕಾರ್ಯ ನಿಮಿತ್ತ ಬೆಂಗಳೂರಿಗೆ ಹೋಗುತ್ತಿದ್ದೇನೆ ಎಂದು ಹೇಳಿ ಹೋಗಿದ್ದ. ಆದರೆ ಬಳಿಕ ಈತ ಕಣ್ಮರೆಯಾದಾಗ ಕುಟುಂಬದವರು, ಪೊಲೀಸರಿಗೆ ದೂರು ನೀಡಿದ್ದರು. ಹತ್ಯೆಗೊಂಡ ಸುದ್ದಿ ತಿಳಿಯುತ್ತಿದ್ದಂತೆ ಪೊಲೀಸರು ಮತ್ತೊಂದು ಸುತ್ತಿನ ತನಿಖೆ ನಡೆಸಲು ನಿರ್ಧರಿಸಿದ್ದಾರೆ.
ಈ ಹಿಂದೆಯೂ ಆಫ್ಘಾನಿಸ್ತಾನದಲ್ಲಿದ್ದ ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆಯ ಅಡಗುದಾಣದ ಮೇಲೆ ಅಮೆರಿಕ ಬೃಹತ್ ಬಾಂಬ್ ಅನ್ನು ಸ್ಫೋಟಿಸಿತ್ತು. ಈ ದಾಳಿಯಲ್ಲಿ ಹತ್ತಾರು ಉಗ್ರರು ಸಾವನ್ನಪ್ಪಿದ್ದರು, ಈ ಪೈಕಿ ಕೇರಳ ಮೂಲದ ಉಗ್ರನೋರ್ವ ಕೂಡ ಸಾವನ್ನಪ್ಪಿದ್ದ.