ಬೆಂಗಳೂರು, ಆ 1 (Daijiworld News/RD): ಅಧಿಕಾರಿಗಳಲ್ಲಿ ಶಿಸ್ತು ತುಂಬಾ ಮುಖ್ಯ, ಸಮಯಕ್ಕೆ ಮಹತ್ವ ಕೊಟ್ಟು ಕೆಲಸ ಮಾಡಬೇಕು, ಹಿಂದಿನ ಸಿಎಂ ಇರುವಾಗ ಯಾವ ರೀತಿ ಕೆಲಸ ಮಾಡುತ್ತಿದ್ದೀರಿ ಅದು ನನಗೆ ಮುಖ್ಯವಲ್ಲ, ಎಲ್ಲಾ ಅಧಿಕಾರಿಗಳು ಶಿಸ್ತು ಪಾಲಿಸುವುದು ಕಡ್ಡಾಯ ಎಂದು ವಿಧಾನಸೌಧದ ಅಧಿಕಾರಿಗಳಿಗೆ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ತರಾಟೆಗೆ ತೆಗೆದುಕೊಂಡಿದ್ದಾರೆ.
ವಿಧಾನಸೌಧದ ನೆಲಮಹಡಿಯಲ್ಲಿರುವ ಸ್ವೀಕೃತಿ ಮತ್ತು ರವಾನೆ ಶಾಖೆಗೆ ಸಿಎಂ ದಿಢೀರ್ ಭೇಟಿ ನೀಡಿ, ಅಧಿಕಾರಿಗಳು ಸಮಯಕ್ಕೆ ಸರಿಯಾಗಿ ಕಚೇರಿಗೆ ಆಗಮಿಸದ ಹಿನ್ನೆಲೆಯಲ್ಲಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ, ಜೊತೆಗೆ ಸಿಬ್ಬಂದಿಗಳಿಗೆ ಎಚ್ಚರಿಕೆ ನೀಡಿದ್ದಾರೆ.
ಮುಖ್ಯಮಂತ್ರಿ ಯಡಿಯೂರಪ್ಪ ಭೇಟಿ ವೇಳೆ ಅಧಿಕಾರಿಗಳು ಇನ್ನೂ ಆಗಮಿಸಿರಲಿಲ್ಲ. ತಡವಾದರೂ ಆಗಮಿಸದ ಸಿಬ್ಬಂದಿಯ ವರ್ತನೆಗೆ ಸಿಎಂ ಸಿಟ್ಟುಗೊಂಡು ಸರ್ಕಾರಿ ಕೆಲಸದ ಅವಧಿಯಲ್ಲಿ ಎಲ್ಲಾ ಸಿಬ್ಬಂದಿ ಕಡ್ಡಾಯವಾಗಿ ಕಚೇರಿಯಲ್ಲಿ ಹಾಜರಿರಬೇಕು. ಸರಿಯಾದ ಸಮಯಕ್ಕೆ ಕೆಲಸಕ್ಕೆ ಬರಬೇಕು. ಇಲ್ಲವಾದಲ್ಲಿ ಸಿಬ್ಬಂದಿ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂಬ ಎಚ್ಚರಿಕೆಯ ನುಡಿಗಳನ್ನಾಡಿದ್ದಾರೆ ನೀಡಿದ್ದಾರೆ.
ಇದೇ ವೇಳೆ ಅಲ್ಲಿನ ಮೇಲಧಿಕಾರಿಗಳಿಗೂ ಸಿಎಂ ವಾರ್ನ್ ಮಾಡಿದ್ದು, ಹಿಂದಿನ ಸಿಎಂ ಟೈಂ ನನಗೆ ಬೇಕಿಲ್ಲ. ನಿಗದಿಯಾಗಿದ್ದ ಸಮಯಕ್ಕೆ ನಾನು ಸಭೆ ನಡೆಸುತ್ತೇನೆ. ಎಲ್ಲ ಅಧಿಕಾರಿಗಳು ಸಮಯ ಹಾಗೂ ಶಿಸ್ತು ಪಾಲಿಸುವುದು ಕಡ್ಡಾಯ. ನಿಮ್ಮ ಕೆಳ ಸಿಬ್ಬಂದಿಗೂ ಈ ಕುರಿತು ಎಚ್ಚರಿಕೆ ನೀಡಿ ಎಂದು ಸ್ಥಳದಲ್ಲೇ ಅಧಿಕಾರಿಗಳಿಗೆ ಸಿಎಂ ಗುಡುಗಿದ್ದಾರೆ.
ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ಆರ್ಥಿಕ ಇಲಾಖೆ ಅಧಿಕಾರಿಗಳ ಸಭೆ ನಡೆಸಿ ರಾಜ್ಯದ ಹಣಕಾಸು ಪರಿಸ್ಥಿತಿ ಕುರಿತು ಮಾಹಿತಿ ಪಡೆದರು. ಸಭೆಯಲ್ಲಿ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್, ಆರ್ಥಿಕ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಐ.ಎಸ್.ಎನ್ ಪ್ರಸಾದ್, ಮುಖ್ಯಮಂತ್ರಿಯವರ ಸಲಹೆಗಾರ ಎಂ.ಲಕ್ಷ್ಮೀನಾರಾಯಣ, ಮುಖ್ಯಮಂತ್ರಿಯವರ ಅಪರ ಮುಖ್ಯ ಕಾರ್ಯದರ್ಶಿ ಡಾ.ಇ.ವಿ.ರಮಣ ರೆಡ್ಡಿ ಹಾಗೂ ಇತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.