ನವದೆಹಲಿ, ಆ 1 (Daijiworld News/MSP): "ಉನ್ನಾವೋ ಅತ್ಯಾಚಾರ ಪ್ರಕರಣದಲ್ಲಿ ಆರೋಪ ಹೊತ್ತಿರುವ ಪಕ್ಷದ ಶಾಸಕ ಕುಲದೀಪ್ ಸಿಂಗ್ ಸೆಂಗಾರ್ ಅವರಿಗೆ ಆಡಳಿತಾರೂಢ ಬಿಜೆಪಿ ಬೆಂಬಲವಿದೆ" ಎಂದು ಪ್ರತಿಪಕ್ಷ ಕಾಂಗ್ರೆಸ್, ಬಿಎಸ್ಪಿ ಮತ್ತು ಎಸ್ಪಿ ಸೇರಿ ಅನೇಕ ಪಕ್ಷದ ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿರುವ ಬೆನ್ನಲ್ಲೇ, ಆರೋಪ ಎದುರಿಸುತ್ತಿರುವ ಶಾಸಕ ಕುಲದೀಪ್ ಸಿಂಗ್ ಸೆಂಗಾರ್ ನನ್ನು 'ಭಾರತೀಯ ಜನತಾ ಪಕ್ಷ' ಗುರುವಾರ ಪಕ್ಷದಿಂದ ಉಚ್ಛಾಟಿಸಿದೆ ಎಂದು ಯುಪಿ ಬಿಜೆಪಿ ಮುಖ್ಯಸ್ಥ ಸ್ವತಂತ್ರ ದೇವ್ ಸಿಂಗ್ ಹೇಳಿದ್ದಾರೆ.
ಉನ್ನಾವ್ ಅತ್ಯಾಚಾರ ಪ್ರಕರಣ ಈಗಾಗಲೇ ಸಿಬಿಐಗೆ ಹಸ್ತಾಂತರವಾಗಿದ್ದು, ಬಿಜೆಪಿ ಶಾಸಕ ಕುಲದೀಪ್ ಸಿಂಗ್ ಸೆಂಗಾರ್ ಮತ್ತು ಇತರ ಒಂಬತ್ತು ಮಂದಿ ವಿರುದ್ಧ ಸೋಮವಾರ ಪ್ರಕರಣ ದಾಖಲಿಸಲಾಗಿದೆ. ಅಲ್ಲದೆ ಸಿಬಿಐ ತನಿಖೆಯನ್ನು ಅತ್ಯಂತ ತ್ವರಿತಗತಿಯಲ್ಲಿ ಅಂದರೆ 7 ದಿನಗಳೊಳಗೆ ಮುಗಿಸುವಂತೆ ಸುಪ್ರೀಂ ಕೋರ್ಟ್ ಸಿಬಿಐಗೆ ಆದೇಶ ನೀಡಿದೆ.
ಅತ್ಯಾಚಾರ ಪ್ರಕರಣ ಬೆಳಕಿಗೆ ಬಂದ ಬಳಿಕ 19 ವರ್ಷದ ಅತ್ಯಾಚಾರ ಸಂತ್ರಸ್ಥೆ ಹಾಗೂ ಅವರ ಕುಟುಂಬ, ವಕೀಲರು ಪ್ರಯಾಣಿಸುತ್ತಿದ್ದ ಕಾರಿಗೆ ರಾಯ್ ಬರೇಲಿಯಲ್ಲಿ ಟ್ರಕ್ ಢಿಕ್ಕಿಯಾಗಿತ್ತು. ಈ ಘಟನೆಯಲ್ಲಿ ಇಬ್ಬರು ಸಾವನ್ನಪ್ಪಿದ್ದರು. ಇದೊಂದು ಪೂರ್ವಯೋಜಿತ ಘಟನೆ ಎಂದು ಸಂತ್ರಸ್ಥೆ ದೂರಿದ್ದರು. ಅತ್ಯಾಚಾರ ಸಂತ್ರಸ್ತೆ ಮತ್ತು ಆಕೆಯ ಪರ ವಕೀಲರು ಚಿಕಿತ್ಸೆಗಾಗಿ ದಾಖಲಾಗಿರುವ ಕಿಂಗ್ ಜಾರ್ಜ್ ವೈದ್ಯಕೀಯ ಕಾಲೇಜಿನಲ್ಲಿ ಚಿಕಿತ್ಸೆಗಾಗಿ ದಾಖಲಾಗಿದ್ದಾರೆ.