ಬೆಂಗಳೂರು, ಆ 1 (Daijiworld News/MSP): ಶಾಸಕತ್ವದಿಂದ ಅನರ್ಹಗೊಳಿಸಿರುವ ಸ್ಪೀಕರ್ ಕ್ರಮ ಪ್ರಶ್ನಿಸಿ ಅನರ್ಹಗೊಂಡ ಜೆಡಿಎಸ್ನ ಮೂವರು, ಕಾಂಗ್ರೆಸ್ನ 11 ಶಾಸಕರು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದಾರೆ.
ಮಾಜಿ ಸಚಿವ ವಿಶ್ವನಾಥ್ ಸೇರಿದಂತೆ ಹಲವು ಅನರ್ಹ ಶಾಸಕರು ನವದೆಹಲಿಯಲ್ಲಿ ವಕೀಲರೊಂದಿಗೆ ಚರ್ಚಿಸಿ ಇಂದು ಸುಪ್ರೀಂಕೋರ್ಟ್ಗೆ ಸಲ್ಲಿಸಿದ್ದಾರೆ. ವಿಪ್ ನಿಯಮ ಹಾಗೂ ಪಕ್ಷ ವಿರೋಧಿ ಚಟುವಟಿಕೆ ಹಿನ್ನೆಲೆಯಲ್ಲಿ ಹಿಂದಿನ ಸ್ಪೀಕರ್ ರಮೇಶ್ ಕುಮಾರ್, ಜೆಡಿಎಸ್ ಹಾಗೂ ಕಾಂಗ್ರೆಸ್ನ ಎಲ್ಲಾ ಅತೃಪ್ತ ಶಾಸಕರನ್ನ ಅನರ್ಹಗೊಳಿಸಿ ಆದೇಶ ನೀಡಿದ್ದರು.
ಅನರ್ಹಗೊಂಡ 17 ಶಾಸಕರ ಪೈಕಿ ರಮೇಶ್ ಜಾರಕಿಹೊಳಿ, ಮಹೇಶ್ ಕುಮಟಳ್ಳಿ ಈ ಹಿಂದೆಯೇ ಸ್ಪೀಕರ್ ಕ್ರಮ ಪ್ರಶ್ನಿಸಿ ಸುಪ್ರೀಂಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಇನ್ನು ಆರ್.ಶಂಕರ್ ಅವರು ಪ್ರತ್ಯೇಕವಾಗಿ ಸುಪ್ರೀಂ ಮೆಟ್ಟಿಲೇರಿದ್ದರು. ಹೀಗಾಗಿ ಉಳಿದ ಅನರ್ಹಗೊಂಡ 14 ಜನ ಸ್ಪೀಕರ್ ಅವರ ಆದೇಶದ ಪ್ರತಿ ಪಡೆದುಕೊಂಡು ಗುರುವಾರ ಅರ್ಜಿ ಸಲ್ಲಿಸಿದರು. ಅನರ್ಹಗೊಂಡ ಶಾಸಕರ ಪರ ಮುಕುಲ್ ರೊಹಟಗಿ ವಾದ ಮಂಡಿಸಲಿದ್ದಾರೆ.
ಸುಪ್ರೀಂ ವಿಚಾರಣೆಯ ಮೇಲೆ ಅನರ್ಹ ಗೊಂಡವರ ಭವಿಷ್ಯ ನಿರ್ಧಾರವಾಗಲಿದೆ. ಅನರ್ಹರ ಅರ್ಜಿ ಸಲ್ಲಿಕೆಯ ನಡುವೆ ಕಾಂಗ್ರೆಸ್ ನಮ್ಮ ವಾದವನ್ನು ಕೂಡ ಕೇಳಬೇಕಿ ಎಂದು ಕೇವಿಯಟ್ ಸಲ್ಲಿಸಲಿದೆ.