ಜಬಲ್ಪುರ, ಆ.02(Daijiworld News/SS): ಹಿಂದುಯೇತರ ವ್ಯಕ್ತಿ ಆಹಾರ ಸರಬರಾಜು ಮಾಡಿದ್ದಕ್ಕೆ ಆರ್ಡರ್ ಅನ್ನೇ ರದ್ದುಪಡಿಸಿದ್ದ ಗ್ರಾಹಕನ ವಿರುದ್ಧ ಪೊಲೀಸರು ಕ್ರಮ ಕೈಗೊಂಡಿದ್ದಾರೆ.
ಈ ಕುರಿತು ಮಾತನಾಡಿರುವ ಜಬಲ್ಪುರ ಪೊಲೀಸ್ ವರಿಷ್ಠಾಧಿಕಾರಿ ಅಮಿತ್ ಸಿಂಗ್, ವಿಚಾರಣೆಗೆ ಹಾಜರಾದಾಗ ಅವರಿಗೆ ಕೋಮುಘರ್ಷಣೆಗೆ ಪ್ರಚೋದನೆ ನೀಡದಂತೆ ಎಚ್ಚರಿಕೆ ನೀಡಲಾಗುವುದು. ಅವರ ಟ್ವೀಟ್ಗಳ ಮೇಲೆ ನಿಗಾ ಇರಿಸಲಾಗಿದೆ. ಒಂದು ವೇಳೆ ಅವರು ಮತ್ತೆ ಪ್ರಚೋದನಕಾರಿ ಟ್ವೀಟ್ ಮಾಡಿದಲ್ಲಿ ಬಂಧಿಸುತ್ತೇವೆ. ಆರು ತಿಂಗಳವರೆಗೂ ಅವರ ಅಪರಾಧಕ್ಕೆ ಜೈಲು ವಾಸ ಅನುಭವಿಸಬೇಕಾಗುತ್ತದೆ ಎಂದು ಹೇಳಿದ್ದಾರೆ.
ಮಧ್ಯಪ್ರದೇಶದ ಜಬಲ್ಪುರ ಎಂಬ ಪ್ರದೇಶದ ಅಮಿತ್ ಶುಕ್ಲಾ ಝೊಮ್ಯಾಟೋದಿಂದ ತಿಂಡಿಯನ್ನು ಆರ್ಡರ್ ಮಾಡಿದ್ದರು. ಆದರೆ ತಮಗೆ ಅದನ್ನು ತಂದು ಕೊಡುತ್ತಿರುವ ವ್ಯಕ್ತಿ ಹಿಂದು ಮತದವನಲ್ಲ, ಅನ್ಯ ಮತೀಯ ಎಂಬುವುದು ತಿಳಿಯುತ್ತಿದ್ದಂತೆಯೇ ಶುಕ್ಲಾ ಆ ಆರ್ಡರ್ ಅನ್ನು ಕ್ಯಾನ್ಸಲ್ ಮಾಡಿದ್ದರು. ಕ್ಯಾನ್ಸಲ್ ಮಾಡುವ ಮುನ್ನ "ಡೆಲಿವರಿ ಬಾಯ್ ಅನ್ನು ಬದಲಾಯಿಸಿ, ಬೇರೆಯವರನ್ನು ಕಳಿಸಿಕೊಡಿ" ಎಂದು ಶುಕ್ಲಾ ಕೇಳಿದ್ದರು. ಅದಕ್ಕೆ ಝೊಮ್ಯಾಟೋ ಒಪ್ಪಿರಲಿಲ್ಲ. ಹೀಗಾಗಿ ಶುಕ್ಲಾ ಆ ಆರ್ಡರ್ ಅನ್ನು ಕ್ಯಾನ್ಸಲ್ ಮಾಡಿದ್ದರು. ಆದರೆ ಕ್ಯಾನ್ಸಲ್ ಮಾಡಿದ್ದಕ್ಕಾಗಿ ತಾವು ಆ ಹಣವನ್ನು ಮರುಪಾವತಿ ಮಾಡುವುದಿಲ್ಲ ಎಂದು ಝೊಮ್ಯಾಟೋ ಸ್ಪಷ್ಟಪಡಿಸಿತ್ತು.
'ನಾನು ರೈಡರ್ ಅನ್ನು ಬದಲಾಯಿಸಲು ಹೇಳಿದ್ದೆ ಅಷ್ಟೇ' ಎಂದು ಶುಕ್ಲಾ ತಮ್ಮ ನಡೆಯನ್ನು ಸಮರ್ಥಿಸಿಕೊಂಡಿದ್ದರು. ಆದರೆ ಟ್ವಿಟ್ಟರ್ ನಲ್ಲಿ ನೇರವಾಗಿಯೇ ಅವರು, "ಡೆಲಿವರಿ ಬಾಯ್ ಅನ್ಯಮತೀಯರಾಗಿದ್ದ ಕಾರಣಕ್ಕೆ ನಾನು ಆರ್ಡರ್ ಕ್ಯಾನ್ಸಲ್ ಮಾಡಿದೆ" ಎಂದು ಶುಕ್ಲಾ ಹೇಳಿಕೊಂಡಿದ್ದರು.
ಝೊಮ್ಯಾಟೋ ಇದಕ್ಕೆ "ಆಹಾರಕ್ಕೆ ಧರ್ಮವಿಲ್ಲ. ಆಹಾರವೇ ಧರ್ಮ" ಎಂದು ಉತ್ತರಿಸಿತ್ತು. ಈ ಟ್ವೀಟ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಈ ಸಂಬಂಧ ಗ್ರಾಹಕ ಅಮಿತ್ ಶುಕ್ಲಾನ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಪೊಲೀಸರು ನೋಟಿಸ್ ನೀಡಿದ್ದಾರೆ. ಮಾತ್ರವಲ್ಲ, ಧಾರ್ಮಿಕ ದ್ವೇಷಕಾರಿ ಭಾವನೆಯನ್ನು ಹರಡುವುದಿಲ್ಲ ಎಂಬ ಲಿಖಿತ ಒಪ್ಪಿಗೆಯನ್ನು ಜೋಮ್ಯಾಟೋ ಗ್ರಾಹಕ ಅಮಿತ್ ಶುಕ್ಲಾ ಅವರಿಂದ ಜಬಲ್ ಪುರ ಪೊಲೀಸರು ಪಡೆದುಕೊಂಡಿದ್ದಾರೆ.