ನವದೆಹಲಿ, ಆ.02(Daijiworld News/SS): 2019ನೇ ಸಾಲಿನ ರಾಮನ್ ಮ್ಯಾಗ್ಸೆಸ್ಸೆ ಪ್ರಶಸ್ತಿಗೆ ಹಿರಿಯ ಪತ್ರಕರ್ತ ರವೀಶ್ ಕುಮಾರ್ ಅವರು ಆಯ್ಕೆಯಾಗಿದ್ದು, ಇದೇ ತಿಂಗಳ 31ರಂದು ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.
ರವೀಶ್ ಕುಮಾರ್ ಎನ್'ಡಿಟಿವಿ ಇಂಡಿಯಾ ಸುದ್ದಿವಾಹಿನಿಯ ಹಿರಿಯ ಕಾರ್ಯಕಾರಿ ಸಂಪಾದಕರಾಗಿದ್ದು, ಭಾರತದ ಅತ್ಯಂತ ಪ್ರಭಾವಿ ಟಿವಿಪತ್ರಕರ್ತರಲ್ಲೊಬ್ಬರಾಗಿದ್ದಾರೆ ಎಂದು ರಾಮನ್ ಮ್ಯಾಗ್ಸೆಸೆ ಪ್ರಶಸ್ತಿ ಫೌಂಡೇಶನ್ ತಿಳಿಸಿದೆ. ಏಷ್ಯಾ ಖಂಡದಲ್ಲಿ ಯಾವುದೇ ಕ್ಷೇತ್ರದಲ್ಲಿ ಅಪಾರ ಸಾಧನೆ ಮಾಡಿದವರನ್ನು ಗುರುತಿಸಿ ನೀಡಲಾಗುವ ಅತ್ಯುನ್ನತ ನಾಗರಿಕ ಗೌರವ ಇದಾಗಿದ್ದು, ಏಷ್ಯಾ ಖಂಡದ ನೊಬೆಲ್ ಪ್ರಶಸ್ತಿ ಎಂದೇ ಇದನ್ನು ಪರಿಗಣಿಸಲಾಗುತ್ತದೆ. ಈ ವರ್ಷ ಪ್ರಶಸ್ತಿಗೆ ಐವರನ್ನು ಆಯ್ಕೆ ಮಾಡಲಾಗಿದೆ.
ಬಿಹಾರ ರಾಜ್ಯದ ಜಿತ್ವಾರ್ಪುರ್ ಗ್ರಾಮದಲ್ಲಿ ಜನಿಸಿದ ರವೀಶ್ ಕುಮಾರ್ 1996ರಲ್ಲಿ ಎನ್'ಡಿಟಿವಿ ಸಂಸ್ಥೆಗೆ ಸೇರಿದ್ದರು. ಜಿಲ್ಲಾ ವರದಿಗಾರ ಹುದ್ದೆಯಿಂದ ಇಂದು ಕಾರ್ಯಕಾರಿ ಸಂಪಾದಕರವರೆಗೆ ಬೆಳೆದಿದ್ದಾರೆ. ನಂತರದ ದಿನಗಳಲ್ಲಿ ಎನ್ ಡಿಟಿವಿ 24 ಗಂಟೆಗಳ ಹಿಂದಿ ಸುದ್ದಿ ವಾಹಿನಿಯಾದ ಎನ್'ಡಿಟಿವಿ ಇಂಡಿಯಾವನ್ನು ಆರಂಭಿಸಿತು. ಹಿಂದಿ ಭಾಷಿಕರಿಗೆ ಅಚ್ಚುಮೆಚ್ಚಾಗಿ ಬೆಳೆದ ಸುದ್ದಿವಾಹಿನಿಯಲ್ಲಿ ರವೀಶ್ ಕುಮಾರ್ ಅವರ ಪ್ರೈಮ್ ಟೈಮ್ ಶೋ ಜನಪ್ರಿಯವಾಗಿತ್ತು.
ಮ್ಯಾನ್ಮಾರ್ ದೇಶದ ಕೊ ಸ್ವೇ ವಿನ್, ಥೈಲ್ಯಾಂಡಿನ ಅಂಖನಾ ನೀಲಪೈಜಿತ್, ಫಿಲಿಫೈನ್ಸಿನ ರೇಮುಂಡು ಕಾಯಾಬ್ಯಾಬ್, ದಕ್ಷಿಣ ಕೊರಿಯಾದ ಕಿಮ್ ಜೊಂಗ್ ಕಿ ಅವರು ಪ್ರಶಸ್ತಿಗೆ ಭಾಜನರಾಗಿದ್ದಾರೆ.