ಬೆಂಗಳೂರು, ಆ.02(Daijiworld News/SS): ಆಧುನಿಕ ತಂತ್ರಜ್ಞಾನ ಬಳಸಿ ಅಪರಾಧ ಪ್ರಕರಣಗಳನ್ನು ತಡೆಗಟ್ಟಬೇಕು ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ.
ರಾಜ್ಯದ ಮುಖ್ಯಮಂತ್ರಿಯಾದ ಬಳಿಕ ಮೊದಲ ಬಾರಿಗೆ ತಮ್ಮ ಗೃಹ ಕಚೇರಿ ಕೃಷ್ಣಾದಲ್ಲಿ ಪೊಲೀಸ್ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ ಅವರು, ಅಮಾಯಕ ಜನರನ್ನು ವಂಚಿಸುವ ಪ್ರಕರಣಗಳಿಗೆ ಕಡಿವಾಣ ಹಾಕುವಂತೆ ಸೂಚನೆ ನೀಡಿದ್ದಾರೆ.
ಮಹಿಳೆಯರ ಸುರಕ್ಷತೆಗೆ ಆದ್ಯತೆ ನೀಡಬೇಕು. ರಾಜ್ಯದಲ್ಲಿ ಕೋಮುಗಲಭೆ ಸಂಭವಿಸದಂತೆ ಎಚ್ಚರ ವಹಿಸಬೇಕು. ಕೋಮು ಗಲಭೆಗಳಿಗೆ ಪ್ರಚೋದನೆ ನೀಡುವವರು ಯಾರೇ ಇರಲಿ ಅಂಥವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು. ಅಕ್ರಮ ಚಟುವಟಿಕೆಗಳು ನಡೆಯದಂತೆ ನಿಗಾ ವಹಿಸಬೇಕು. ಆಧುನಿಕ ತಂತ್ರಜ್ಞಾನ ಬಳಸಿ ನಡೆಯುವ ಅಪರಾಧ ಪ್ರಕರಣಗಳನ್ನು ತಡೆಗಟ್ಟಬೇಕು. ಅಪರಾಧ ಪ್ರಕರಣಗಳನ್ನು ತಗ್ಗಿಸುವ ನಿಟ್ಟಿನಲ್ಲಿ ರಾತ್ರಿ 8ರಿಂದ ಬೆಳಗ್ಗೆ 6 ಗಂಟೆಗಳವರಗೆ ಗಸ್ತು ತಿರುಗುವಂತೆ ಅಧಿಕಾರಿಗಳಿಗೆ ಮುಖ್ಯಮಂತ್ರಿಗಳು ಸೂಚಿಸಿದ್ದಾರೆ.
ಎಲ್ಲಾ ಧರ್ಮದವರು, ಯಾವುದೇ ಅಡ್ಡಿ-ಆತಂಕಗಳಿಲ್ಲದೇ ತಮ್ಮ ತಮ್ಮ ಹಬ್ಬ ಆಚರಿಸಬೇಕು. ಹಬ್ಬದ ದಿನಗಳಲ್ಲಿ ವಿಶೇಷವಾದ ಪೊಲೀಸ್ ಭದ್ರತೆ ನೀಡಬೇಕು. ಇದೇ ವೇಳೆ ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ 25,174 ಹುದ್ದೆಗಳನ್ನು ಭರ್ತಿ ಮಾಡಲು ಕ್ರಮ ಕೈಗೊಳ್ಳುವುದಾಗಿ ಮುಖ್ಯಮಂತ್ರಿಗಳು ತಿಳಿಸಿದ್ದಾರೆ.