ಹೊಸದಿಲ್ಲಿ ಆ 2(Daijiworld News/RD): ವಿಚ್ಛೇದನದಿಂದ ನೊಂದ ಮುಸ್ಲಿಂ ಮಹಿಳೆಯರಿಗೆ ತ್ವರಿತ ನ್ಯಾಯ ಒದಗಿಸಲು ವಿಶೇಷ ಮ್ಯಾಜಿಸ್ಟ್ರೇಟ್ ಕೋರ್ಟ್ಗಳನ್ನು ಸ್ಥಾಪಿಸುವುದಾಗಿ ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು ತ್ರಿವಳಿ ತಲಾಖ್ ಪ್ರಕರಣಗಳಲ್ಲಿ ನೊಂದ ಮುಸ್ಲಿಂ ಮಹಿಳೆಯರಿಗೆ ತ್ವರಿತವಾಗಿ ನ್ಯಾಯ ಒದಗಿಸಲು ಪ್ರತ್ಯೇಕ ಮ್ಯಾಜಿಸ್ಟ್ರೇಟ್ ಕೋರ್ಟ್ಗಳನ್ನು ಸರಕಾರ ರಚಿಸುತ್ತಿದೆ ಎಂದು ಅವರು ತಿಳಿಸಿದರು. ಕಾಂಗ್ರೆಸ್ ತನ್ನ ಆಡಳಿತ ಅವಧಿಯಲ್ಲಿ ಪಕ್ಷವು ಮುಸ್ಲಿಂ ಮಹಿಳೆಯರ ಸಮಸ್ಯೆಗೆ ಸ್ಪಂದಿಸದೆ ಇದ್ದು ಜೊತೆಗೆ ಅನ್ಯಾಯವನ್ನು ಎಸಗುತ್ತಾ ಬಂದಿದೆ, ಇದೀಗ ಆಡಳಿತದಲ್ಲಿರುವ ಬಿಜೆಪಿ ಸರ್ಕಾರ ಅವರ ಕಷ್ಟಗಳಿಗೆ ಉತ್ತಮ ರೀತಿಯಲ್ಲಿ ಸ್ಪಂದಿಸಿ ನ್ಯಾಯ ಒದಗಿಸುತ್ತಾ ಇದೆ.
1986 ರಲ್ಲಿ ಕಾಂಗ್ರೆಸ್ನ ಅಂದಿನ ಪ್ರಧಾನಿ ರಾಜೀವ್ ಗಾಂಧಿ ಅವರು ಶಾಬಾನೋ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಆದೇಶವನ್ನು ರದ್ದುಗೊಳಿಸಿ ಹೊಸ ಕಾನೂನು ರಚಿಸಿದರು. ಆ ಮೂಲಕ ವಿಚ್ಛೇದಿತ ಮುಸ್ಲಿಂ ಮಹಿಳೆಯರ ಹಕ್ಕುಗಳು ಮತ್ತು ಲಿಂಗ ಸಮಾನತೆಯ ಹಕ್ಕುಗಳ ಮೇಲೆ ಅನ್ಯಾಯ ಎಸಗಿದರು. ಈ ಪಕ್ಷವೂ ಈಗಲೂ ವೋಟ್ ಬ್ಯಾಂಕ್ ರಾಜಕಾರಣ ಮಡುತ್ತಿದ್ದು, ಈ ಹಿನ್ನೆಲೆಯಲ್ಲಿ ತ್ರಿವಳಿ ತಲಾಖ್ ವಿಧೇಯಕವನ್ನು ವಿರೋಧಿಸುತ್ತಿದೆ ಎಂದು ರವಿಶಂಕರ್ ಪ್ರಸಾದ್ ಕಟುವಾಗಿ ಟೀಕಿಸಿದರು.
ತ್ರಿವಳಿ ತಲಾಖ್ ವಿಧೇಯಕವನ್ನು ಸಂಸತ್ ಅಂಗೀಕರಿಸಿರುವುದು ಐತಿಹಾಸಿಕ ಘಟನೆ. ಮಹಿಳಾ ಸಬಲೀಕರಣದ ವಿಚಾರದಲ್ಲಿ ಈ ಒಂದು ಮಸೂದೆ ಮಹತ್ವದ್ದಾಗಿದ್ದು, ಇದು 2019 ರ ಭಾರತದ ಸಾಮಾಜಿಕ ಪಿಡಿಗುಗಳನ್ನು ನಿಯಂತ್ರಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಬದ್ಧರಾಗಿರುವುದು ಹೆಮ್ಮೆಯ ವಿಷಯ ಎಂದು ಪ್ರಸಾದ್ ನುಡಿದರು.