ಬೆಂಗಳೂರು, ಆ.02(Daijiworld News/SS): ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿರುವ ಬಿ.ಎಸ್. ಯಡಿಯೂರಪ್ಪ ತಮ್ಮ ಸಚಿವ ಸಂಪುಟ ರಚನೆ ಮಾಡಿಲ್ಲ. ವಾರ ಕಳೆಯುತ್ತಿದ್ದರೂ ಸಂಪುಟ ರಚನೆಯಾಗದೇ ಇರುವುದಕ್ಕೆ ರಾಜ್ಯ ಕಾಂಗ್ರೆಸ್ ವಲಯದಿಂದ ಟೀಕೆ ವ್ಯಕ್ತವಾಗಿದೆ.
ಸಚಿವ ಸಂಪುಟ ರಚನೆಯಲ್ಲಿ ವಿಳಂಬವಾಗುತ್ತಿರುವ ಹಿನ್ನಲೆಯಲ್ಲಿ ರಾಜ್ಯ ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದ್ದು, ಏಲ್ಲಿ ನಿಮ್ಮ ಸಚಿವ ಸಂಪುಟ..? ಆರ್ ಎಸ್ ಎಸ್ ಮತ್ತು ಬಿಜೆಪಿಯ ಅಧಿಕಾರ ಹಂಚಿಕೆಯ ಕಿತ್ತಾಟಕ್ಕೆ ರಾಜ್ಯದ ಜನತೆಗೆ ಯಾಕೆ ತೊಂದರೆ ಕೊಡುತ್ತಿದ್ದೀರಿ..? ಆಡಳಿತ ಯಂತ್ರವನ್ನು ಸ್ಥಗಿತಗೊಳಿಸಿರುವುದು ಸರಿಯಲ್ಲ. ಅಭಿವೃದ್ಧಿಯ ಕೆಲಸಗಳಿಗಾಗಿ ರಾಜ್ಯದ ಜನತೆ ಎಷ್ಟು ದಿನ ಕಾಯಬೇಕು ಎಂದು ಪ್ರಶ್ನಿಸಿದ್ದಾರೆ.
2018ರಲ್ಲಿ ಎಚ್. ಡಿ. ಕುಮಾರಸ್ವಾಮಿ ನೇತೃತ್ವದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ಸಂಪುಟ ರಚನೆ, ಸಚಿವರಿಗೆ ಖಾತೆಗಳ ಹಂಚಿಕೆ ವಿಳಂಬವಾದಾಗ ಯಡಿಯೂರಪ್ಪ ಅವರು ಸೇರಿದಂತೆ ಬಿಜೆಪಿ ನಾಯಕರು ಸಾಕಷ್ಟು ಟೀಕೆ ಮಾಡಿದ್ದರು. ಇದೀಗ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿ ವಾರ ಕಳೆಯುತ್ತಿದ್ದರೂ ಸಂಪುಟ ರಚನೆಯಾಗಿಲ್ಲ. ಹೀಗಾಗಿ ರಾಜಕೀಯ ವಲಯದಲ್ಲಿ ಟೀಕೆಗಳು ಕೇಳಿಬರುತ್ತಿದೆ.
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ನೇತೃತ್ವದ ಸಚಿವ ಸಂಪುಟ ವಿಸ್ತರಣೆ ಆಗಸ್ಟ್ 8ರ ಬಳಿಕ ಆಗುವ ಸಾಧ್ಯತೆ ಇದೆ. ಆಗಸ್ಟ್ 5ರಂದು ಸಂಪುಟ ವಿಸ್ತರಣೆ ಸಂಬಂಧ ಮುಖ್ಯಮಂತ್ರಿಗಳು ಹೊಸದಿಲ್ಲಿಗೆ ತೆರಳಲಿದ್ದಾರೆ. ಆಗಸ್ಟ್ 5 ಮತ್ತು 6ರಂದು ಹೊಸದಿಲ್ಲಿಯಲ್ಲೇ ಬೀಡು ಬಿಡಲಿರುವ ಮುಖ್ಯಮಂತ್ರಿಗಳು ಸಂಪುಟ ವಿಸ್ತರಣೆ ಕುರಿತಂತೆ ಪಕ್ಷದ ರಾಷ್ಟ್ರೀಯ ಮುಖಂಡರ ಜೊತೆ ಚರ್ಚೆ ನಡೆಸಲಿದ್ದಾರೆ. ಆ ಬಳಿಕವೇ ಸಂಪುಟ ವಿಸ್ತರಣೆ ಸಾಧ್ಯತೆ ಇದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.