ನವದೆಹಲಿ, ಆ.02(Daijiworld News/SS): ಕೆಲ ಆಂತರಿಕ ವಿಚಾರವಾಗಿ ಕಣಿವೆ ರಾಜ್ಯಕ್ಕೆ ಹೆಚ್ಚುವರಿ ಸೈನಿಕರನ್ನು ನಿಯೋಜನೆ ಮಾಡಲಾಗಿದೆ ಎಂದು ಕೇಂದ್ರ ಗೃಹ ಸಚಿವಾಲಯ ಸ್ಪಷ್ಟನೆ ನೀಡಿದೆ.
ಕಳೆದ ವಾರವಷ್ಟೇ ಕಣಿವೆ ರಾಜ್ಯಕ್ಕೆ 10 ಸಾವಿರ ಸೈನಿಕರನ್ನು ನಿಯೋಜಿಸಲಾಗಿತ್ತು. ಈ ಬೆಳವಣಿಗೆಯ ಕೇವಲ ಒಂದೇ ವಾರದ ಅವಧಿಯೊಳಗೆ ಮತ್ತೆ ಸುಮಾರು 28 ಸಾವಿರ ಸೈನಿಕರನ್ನು ಗಡಿಗೆ ನಿಯೋಜಿಸಿದೆ. ಕಾಶ್ಮೀರದಲ್ಲಿ ಉಗ್ರ ಚಟುವಟಿಕೆ ಹಿನ್ನಲೆಯಲ್ಲಿ ಕಣಿವೆ ರಾಜ್ಯಕ್ಕೆ ಹೆಚ್ಚುವರಿ ಸೈನಿಕರನ್ನು ರವಾನೆ ಮಾಡಲಾಗಿದೆ ಎಂದು ಹೇಳಲಾಗಿದೆ.
ಈ ಸಂಬಂಧ ಸ್ವತಃ ಕೇಂದ್ರ ಗೃಹ ಸಚಿವಾಲಯ ಸ್ಪಷ್ಟನೆ ನೀಡಿದ್ದು, ಕೆಲ ಆಂತರಿಕ ವಿಚಾರವಾಗಿ ಕಣಿವೆ ರಾಜ್ಯಕ್ಕೆ ಹೆಚ್ಚುವರಿ ಸೈನಿಕರನ್ನು ನಿಯೋಜನೆ ಮಾಡಲಾಗಿದೆ. ಈ ಹಿಂದೆಯೇ ಕಾಶ್ಮೀರಕ್ಕೆ ಹೆಚ್ಚುವರಿ ಸೈನಿಕರ ನಿಯೋಜನೆಗೆ ಸೇನೆ ಅನುಮತಿ ಕೋರಿತ್ತು. ಹೀಗಾಗಿ ಇದೀಗ ಹೆಚ್ಚುವರಿ ಸಿಬ್ಬಂದಿಗಳನ್ನು ನಿಯೋಜನೆ ಮಾಡಲಾಗುತ್ತಿದೆ. ಇದು ದಿಢೀರ್ ನಿರ್ಧಾರವಲ್ಲ ಎಂದು ಸ್ಪಷ್ಟನೆ ನೀಡಿದೆ.
ಸೈನಿಕರ ರವಾನೆಗಾಗಿ ವಾಯುಸೇನೆಯ ಸಿ-17 ಹೆವಿ ಲಿಫ್ಟ್ ಯುದ್ಧ ವಿಮಾನವನ್ನು ಬಳಕೆ ಮಾಡಲಾಗಿದೆ. ಅಲ್ಲದೆ ಹಾಲಿ ಪರಿಸ್ಥಿತಿ ಹಿನ್ನಲೆಯಲ್ಲಿ ಭಾರತೀಯ ವಾಯುಪಡೆಯನ್ನು ಸರ್ವಸನ್ನದ್ಧ ಸ್ಥಿತಿಯಲ್ಲಿ ಇಡಲಾಗಿದೆ ಎಂದು ಹೇಳಿದೆ. ಆದರೆ ಆ ಪರಿಸ್ಥಿತಿ ಕುರಿತು ಯಾವುದೇ ರೀತಿಯ ಮಾಹಿತಿ ನೀಡಲು ಗೃಹ ಸಚಿವಾಲಯ ಮುಂದಾಗಿಲ್ಲ.