ವಿಜಯಪುರ, ಆ 02 (Daijiworld News/SM): ಉಡುಪಿಯ ಪೇಜಾವರ ಶ್ರೀಗಳ ವಿರುದ್ಧ ಮಾಜಿ ಗೃಹ ಸಚಿವ ಎಂ.ಬಿ. ಪಾಟೀಲ್ ತಿರುಗಿಬಿದ್ದಿದ್ದಾರೆ. ತಮ್ಮ ಮಠದಲ್ಲಿನ ದೋಷಗಳನ್ನು ಸರಿಪಡಿಸಿಕೊಳ್ಳದೇ ಮತ್ತೊಂದು ಧರ್ಮದಲ್ಲಿ ಕೈಯಾಡಿಸುವ ಕೆಲಸ ಮಾಡುತ್ತಿರುವುದು ಸರಿಯಲ್ಲ ಎಂದಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಎಂ.ಬಿ.ಪಾಟೀಲ್, ಧರ್ಮದ ಬಗ್ಗೆ ಮಾತನಾಡುವ ಪೇಜಾವರ ಶ್ರೀಗಳು ದಲಿತರ ಜೊತೆ ಮೊದಲು ಭೋಜನ ಸ್ವೀಕರಿಸಬೇಕು. ತಮ್ಮ ಮಠಗಳಿಗೆ ದಲಿತ ಮಠಾಧಿಪತಿ ಅಥವಾ ಲಿಂಗಾಯತ ವ್ಯಕ್ತಿಗಳನ್ನಾಗಲಿ ಮಠಾಧೀಶರನ್ನಾಗಿ ನೇಮಕ ಮಾಡಲಿ ಎಂದು ಒತ್ತಾಯಿಸಿದ್ದಾರೆ.
ಧರ್ಮದ ಬಗ್ಗೆ ಚರ್ಚಿಸಲು ತಮಗೆ ಪಂಥಾಹ್ವಾನ ಕೊಡಲು ಪೇಜಾವರ ಶ್ರೀಗಳು ಯಾರು ಎಂದು ಪ್ರಶ್ನಿಸಿರುವ ಅವರು, ಪೇಜಾವರ ಶ್ರೀಗಳು ಕರೆದ ಕಡೆಗಳಿಗೆ ತೆರಳಲು ಅವರೇನೂ ದೇಶದ ಪ್ರಧಾನ ಮಂತ್ರಿಯಾಗಿದ್ದಾರಾ? ಅಥವಾ ಕಾಂಗ್ರೆಸ್ ಪಕ್ಷದ ಹೈಕಮಾಂಡೋ ಎಂದು ಅವರು ಅಸಮಾಧಾನ ಹೊರಹಾಕಿದ್ದಾರೆ.