ಬಾಲೋದ್, ಫೆ. 24 (DaijiworldNews/TA): ಛತ್ತೀಸ್ಗಢದ ಬಾಲೋದ್ ಜಿಲ್ಲೆಯ ಮೆಡಕಿ ಗ್ರಾಮವು ಸುಳ್ಳು ಸುದ್ದಿ ಮತ್ತು ವದಂತಿಗಳ ಹಾವಳಿಯನ್ನು ತಡೆಯಲು ಕಠಿಣ ಹಾಗೂ ಮಾದರಿ ನಿರ್ಧಾರ ಕೈಗೊಂಡಿದೆ. ಫೆಬ್ರವರಿ 19ರಂದು ನಡೆದ ಗ್ರಾಮಸಭೆಯಲ್ಲಿ ಅಂಗೀಕರಿಸಿದ ತೀರ್ಮಾನದ ಪ್ರಕಾರ, ಸಾರ್ವಜನಿಕ ಸ್ಥಳಗಳಲ್ಲಿ, ಸಾಮಾಜಿಕ ಅಥವಾ ಧಾರ್ಮಿಕ ಕಾರ್ಯಕ್ರಮಗಳಲ್ಲಿ ವದಂತಿ ಹಬ್ಬಿಸಿದರೆ 5,000 ರೂಪಾಯಿ ದಂಡ ವಿಧಿಸಲಾಗುತ್ತದೆ. ವೈಯಕ್ತಿಕ ಗೌರವಕ್ಕೆ ಧಕ್ಕೆ ತರುವ ಹೇಳಿಕೆಗಳಿಗೂ ಇದೇ ನಿಯಮ ಅನ್ವಯವಾಗಲಿದೆ.

ಗ್ರಾಮದಲ್ಲಿ ಸಣ್ಣಪುಟ್ಟ ವಿಚಾರಗಳಿಗೂ ಗಾಳಿಸುದ್ದಿಗಳು ಹಬ್ಬಿ ಅನಗತ್ಯ ಗಲಾಟೆಗಳು ಉಂಟಾಗುತ್ತಿದ್ದವು ಎಂಬುದು ಈ ನಿರ್ಧಾರದ ಹಿನ್ನೆಲೆ ವಿಶೇಷವಾಗಿ ವಾಟ್ಸಾಪ್ ಸೇರಿದಂತೆ ಸಾಮಾಜಿಕ ಮಾಧ್ಯಮಗಳ ಮೂಲಕ ಹರಡುವ ಸುಳ್ಳು ಸುದ್ದಿಗಳು ಗ್ರಾಮಸ್ಥರ ನಡುವೆ ವೈಷಮ್ಯ ಹಾಗೂ ಅಶಾಂತಿಗೆ ಕಾರಣವಾಗುತ್ತಿದ್ದವು. ಇದರಿಂದ ಬೇಸತ್ತ ಗ್ರಾಮದ ಹಿರಿಯರು ಮತ್ತು ಪಂಚಾಯತ್ ಸದಸ್ಯರು ಒಟ್ಟಾಗಿ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಈ ಕ್ರಮಕ್ಕೆ ಮುಂದಾಗಿದ್ದಾರೆ.
ಗ್ರಾಮದ ಪ್ರವೇಶದ್ವಾರ ಹಾಗೂ ಪ್ರಮುಖ ಸ್ಥಳಗಳಲ್ಲಿ ಹೊಸ ನಿಯಮದ ಕುರಿತು ಫಲಕಗಳನ್ನು ಅಳವಡಿಸಲಾಗಿದೆ. ವದಂತಿ ಹಬ್ಬಿಸುವವರ ಕುರಿತು ಮಾಹಿತಿ ನೀಡುವವರಿಗೆ 501 ರೂಪಾಯಿ ಬಹುಮಾನ ನೀಡಲಾಗುತ್ತದೆ. ಮಾಹಿತಿ ನೀಡುವವರ ಹೆಸರು ಸಂಪೂರ್ಣ ಗೌಪ್ಯವಾಗಿರಿಸಲಾಗುತ್ತದೆ ಎಂದು ಗ್ರಾಮಸಭೆ ಸ್ಪಷ್ಟಪಡಿಸಿದೆ.
ದಂಡದ ಮೂಲಕ ಸಂಗ್ರಹವಾಗುವ ಹಣವನ್ನು ಗ್ರಾಮದ ಅಭಿವೃದ್ಧಿ ಕಾರ್ಯಗಳು ಮತ್ತು ಬಡವರ ನೆರವಿಗಾಗಿ ಬಳಸಲಾಗುತ್ತದೆ ಎಂದು ತಿಳಿಸಲಾಗಿದೆ. ಸುಳ್ಳು ಸುದ್ದಿ ವಿರುದ್ಧ ಸಾಮಾಜಿಕ ಜವಾಬ್ದಾರಿಯನ್ನು ಹೆಚ್ಚಿಸಲು ಮೆಡಕಿ ಗ್ರಾಮ ಕೈಗೊಂಡಿರುವ ಈ ಕ್ರಮವನ್ನು ಇತರ ಗ್ರಾಮಗಳೂ ಮಾದರಿಯಾಗಿ ಪರಿಗಣಿಸುತ್ತಿವೆ.