ನವದೆಹಲಿ, ಆ 02 (Daijiworld News/SM): ರಾಮಜನ್ಮ ಭೂಮಿ ಅಯೋಧ್ಯೆಯಲ್ಲಿ ಮಂದಿರ ಹಾಗೂ ಮಸೀದಿ ಸಂಬಂಧವಿರುವ ಭೂ ವಿವಾದವನ್ನು ಇತ್ಯರ್ಥಪಡಿಸಲು ಸಂಧಾನ ಸಮಿತಿಯಿಂದ ಸಾಧ್ಯವಾಗಿಲ್ಲ.ಈ ಹಿನ್ನೆಲೆಯಲ್ಲಿ ಆಗಸ್ಟ್ 6 ರಿಂದ ನಿತ್ಯವೂ ಪ್ರಕರಣದ ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ಶುಕ್ರವಾರ ನಿರ್ಧರಿಸಿದೆ.
ಸಂಧಾನಕ್ಕೆ ಸಂಬಂಧಿಸಿದಂತೆ ಕೋರ್ಟ್ ಸಮಿತಿಯೊಂದನ್ನು ನೇಮಿಸಿತ್ತು. ಆದರೆ, ಈ ಸಮಿತಿಗೆ ಸಂಧಾನ ಕುರಿತಂತೆ ಯಾವುದೇ ಅಂತಿಮ ನಿರ್ಧಾರಕ್ಕೆ ಬರಲು ಸಾಧ್ಯವಾಗಿಲ್ಲ. ಇದೇ ಕಾರಣದಿಂದಾಗಿ ನ್ಯಾಯಾಲಯ ಈ ನಿರ್ಧಾರಕ್ಕೆ ಬಂದಿದೆ.
ಇದೀಗ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ ನೇತೃತ್ವದ ಐವರು ನ್ಯಾಯಾಧೀಶರ ಸಂವಿಧಾನ ಪೀಠ, ಇದೆ 6ರಿಂದ ಆದ್ಯತೆ ಮೇಲೆ ವಿಚಾರಣೆ ಪ್ರಾರಂಭಿಸುವುದಾಗಿ ತಿಳಿಸಿದೆ.
ಸಂಧಾನ ಸಮಿತಿಯ ಪ್ರಗತಿ ವರದಿಗೆ ಸಂಬಂಧಿಸಿದಂತೆ ಗುರುವಾರ ಮೂರು ಸದಸ್ಯರ ಸಂಧಾನ ಸಮಿತಿ ವರದಿಯನ್ನು ಮೊಹರು ಮಾಡಿದ ಲಕೋಟೆಯಲ್ಲಿ ನ್ಯಾಯಾಲಯಕ್ಕೆ ಸಲ್ಲಿಸಿತ್ತು. ಆದರೆ, ಸಮಿತಿ ಅಂತಿಮ ನಿರ್ಧಾರ ಕೈಗೊಳ್ಳುವಂತಹ ಯಾವುದೇ ಪ್ರಗತಿಯನ್ನು ಪಡೆದುಕೊಳ್ಳುವಲ್ಲಿ ವಿಫಲಗೊಂಡಿದೆ.