National
ಭಟ್ಕಳ : ಡಿವೈಎಸ್ಪಿ ವೆಲೈಂಟೈನ್ ಡಿ ಸೋಜಾಗೆ ರಾಷ್ಟ್ರಪತಿಗಳ ಪೊಲೀಸ್ ಪದಕ ಪ್ರದಾನ
- Fri, Aug 02 2019 09:43:10 PM
-
ಭಟ್ಕಳ, ಆ 02 (Daijiworld News/SM): ವರ್ಷಗಳ ಹಿಂದೆ ಭಟ್ಕಳಕ್ಕೆ ಪೊಲೀಸ್ ಅಧೀಕ್ಷಕರಾಗಿ(ಡಿವೈಎಸ್ಪಿ) ನೇಮಕಗೊಂಡ ವೆಲೈಂಟೈನ್ ಡಿಸೋಜ ಸೇರಿದಂತೆ ನಾಲ್ವರು ಹಿರಿಯ ಪೊಲೀಸ್ ಅಧಿಕಾರಿಗಳು ರಾಷ್ಟ್ರಪತಿಗಳ ಪೊಲೀಸ್ ಮೆಡಲ್ ಗೆ ಆಯ್ಕೆಯಾಗಿದ್ದು, ಜುಲೈ 31ರಂದು ರಾಜಭವನದಲ್ಲಿ ನಡೆದ ಸಮಾರಂಭದಲ್ಲಿ ಈ ಪ್ರಶಸ್ತಿ ಪ್ರದಾನ ಮಾಡಲಾಯಿತು.
ರಾಜ್ಯ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಡಾ.ಎಂ.ಎಸ್. ಪರಶಿವಮೂರ್ತಿ ಅವರು ಪದಕಗಳನ್ನು ಪದಕ ಪುರಸ್ಕೃತ ಪೊಲೀಸ್ ಅಧಿಕಾರಿಗಳ ವಿವರ ನೀಡಿದರು. ಉದಯ್ ನಾಯಕ್, ವಿನಯ ಎ ಗಾಂವ್ಕರ್ ಮತ್ತು ಸುಧೀರ್ ಹೆಗ್ಡೆ ಪುರಸ್ಕಾರ ಪಡೆದಂತಹ ಇತರ ಅಧಿಕಾರಿಗಳಾಗಿದ್ದಾರೆ.
ವೆಲೈಂಟೈನ್ ಡಿಸೋಜ ಬಗ್ಗೆ ಒಂದಿಷ್ಟು ಮಾಹಿತಿ:
1964 ಮಾರ್ಚ್ 6ರಂದು ದಿ. ಫ್ರಾನ್ಸಿಸ್ ಡಿಸೋಜ ಹಾಗೂ ಫ್ಲೋರ ಡಿಸೋಜ ಇವರ ಪುತ್ರನಾಗಿ ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ ವೆಲೈಂಟೈನ್ ಡಿಸೋಜ ಅವರ ಜನನವಾಯಿತು. ಹುಟ್ಟೂರಿನಲ್ಲೇ ಅವರು ತಮ್ಮ ಆರಂಭಿಕ ಶಿಕ್ಷಣವನ್ನು ಪೂರ್ಣಗೊಳಿಸಿದರು.
ಸತತ ಅಭ್ಯಾಸ ಹಾಗೂ ಪರಿಶ್ರಮದ ಫಲವಾಗಿ 1994ರಲ್ಲಿ ಅವರು ಎಸ್ ಐಯಾಗಿ ಪೊಲೀಸ್ ಇಲಾಖೆಯ ಸೇವೆಗೆ ಸೇರ್ಪಡೆಗೊಂಡರು. ಮಂಗಳೂರಿನ ಗ್ರಾಮಾಂತರ ಠಾಣೆಯಲ್ಲಿ ಅವರು ತಮ್ಮ ಪ್ರೊಬೆಷನರಿ ಅವಧಿಯನ್ನು ಪೂರ್ಣಗೊಳಿಸಿದರು. 2000 ವರ್ಷದಲ್ಲಿ ಅವರು ಹೊನ್ನಾವರಕ್ಕೆ ವರ್ಗಾವಣೆಗೊಂಡರು.
ವೆಲೈಂಟೈನ್ ಅವರು ಹೊನ್ನಾವರದಲ್ಲಿ ಸೇವೆ ಸಲ್ಲಿಸುತ್ತಿದ್ದಾಗ, ಅಲ್ಲಿನ ಪೊಲೀಸರು ಶೌಚಾಲಯಗಳ ಕೊರತೆಯಿಂದ ಸಂಕಷ್ಟಕ್ಕೀಡಾಗಿರುವುದನ್ನು ಅರಿತು ಆ ಸಮಸ್ಯೆಯನ್ನು ಬಗೆಹರಿಸಲು ಮುಂದಾಗಿ ಎಲ್ಲರಿಂದಲೂ ಶ್ಲಾಘನೆಗೊಳಗಾಗಿದ್ದರು. 2001ರಲ್ಲಿ ಭಟ್ಕಳ್ ಗೆ ವರ್ಗಾವಣೆಗೊಂಡ ಅವರು, ಗಣೇಶ ಚತುರ್ಥಿಯ ಸಂದರ್ಭದಲ್ಲಿ ಗಣೇಶ ವಿಗ್ರಹವನ್ನು ಸ್ಥಾಪಿಸುವ ಸಭಾಂಗಣವಿಲ್ಲದ್ದನ್ನು ಕಂಡು ಸಭಾಂಗಣವನ್ನು ನಿರ್ಮಿಸಿ ಶಹಭಾಸ್ ಗಿರಿ ಗಿಟ್ಟಿಸಿಕೊಂಡರು.
ನಂತರ ಅವರು ಉಡುಪಿ, ಬಂಟ್ವಾಳ, ಡಿಸಿಆರ್ ಬಿ ಚಿಕ್ಕಮಗಳೂರು, ಕುಂದಾಪುರ, ಪಣಂಬೂರು, ಕಾರ್ಕಳ ಮತ್ತು ಸಿಸಿಬಿ ಮಂಗಳೂರು ಇವುಗಳಲ್ಲಿ ಪ್ರಾಮಾಣಿಕ ಸೇವೆ ಸಲ್ಲಿಸಿದರು. ತಮ್ಮ ಸೇವಾವಧಿಯಲ್ಲಿ ಜನ ಸ್ನೇಹಿಯಾಗಿ ಕಾರ್ಯಗಳನ್ನು ಕೈಗೊಳ್ಳುವುದನ್ನು ಮುಂದುವರಿಸಿದರು. ಪಣಂಬೂರಿನಲ್ಲಿ ಅವರ ಅವಧಿಯಲ್ಲಿ, ಕೋಮು ಗಲಭೆ ಸೃಷ್ಠಿಗೆ ಯತ್ನಿಸುತ್ತಿದ್ದ ಹಲವರನ್ನು ನಿಯಂತ್ರಣಕ್ಕೆ ತರುವಲ್ಲಿ ಅವರು ಯಶಸ್ವಿ ಎಣಿಸಿಕೊಂಡರು. ಇನ್ನು ಕೊಂಬಿಂಗ್ ಕಾರ್ಯಾಚರಣೆಯ ಮೂಲಕ ಕಾರ್ಕಳದಲ್ಲಿ ನಕ್ಸಲ್ ಭೀತಿಯನ್ನು ದೂರ ಮಾಡಲು ಯತ್ನಿಸಿದರು.
ಇನ್ನು ಡಿಎಸ್ಪಿಯಾಗಿ ಅವರು ಮಂಗಳೂರು ಸಿ.ಸಿ.ಆರ್.ಬಿ.ಯಲ್ಲಿ ಕೆಲಸ ನಿರ್ವಹಿಸಿದರು. ಅವರನ್ನು 2018ರ ಮಾರ್ಚ್ 12ರಂದು ಇಲ್ಲಿಗೆ ವರ್ಗಾವಣೆ ಮಾಡಲಾಗಿತ್ತು. ಮತ್ತು ಒಂದು ಬದಿಯ ಪಾರ್ಕಿಂಗ್, ಒನ್ ವೇ ರೈಡಿಂಗ್ ಮತ್ತು ಪಾರ್ಕಿಂಗ್ ಸಮಸ್ಯೆಗಳನ್ನು ಯಶಸ್ವಿಯಾಗಿ ನಿಭಾಯಿಸಿದರು. ಅಲ್ಲದೆ, ವಿದ್ಯಾರ್ಥಿಗಳಲ್ಲಿ ಕಾನೂನು ಜಾಗೃತಿ ಮೂಡಿಸುವಲ್ಲಿ ಅವರು ಸಕ್ರಿಯವಾಗಿ ಭಾಗವಹಿಸುತ್ತಿದ್ದಾರೆ.
ಇನ್ನು ವೆಲೈಂಟೈನ್ ಪ್ರಸಿದ್ಧಿಯನ್ನು ಹೊಂದಿರುವ ಅಂತರರಾಷ್ಟ್ರೀಯ ಬಾಡಿ ಬಿಲ್ಡರ್ ಕೂಡ ಹೌದು. ಅವರು 1997ರಿಂದ 1999ರ ಸಮಯದಲ್ಲಿ ಮೈಸೂರು ವಿಶ್ವವಿದ್ಯಾಲಯದಿಂದ ಚಿನ್ನದ ಪದಕಗಳನ್ನು ಗೆದ್ದಿದ್ದರು. ದೇಹಧಾರ್ಡ್ಯ ಸ್ಪರ್ಧೆಯಲ್ಲಿ ಹಲವಾರು ಪ್ರಶಸ್ತಿ ಮತ್ತು ಸಾಮಾಜಿಕ ಸೇವಾ ಚಟುವಟಿಕೆಗಳಿಗಾಗಿ ಅನೇಕ ಪ್ರಶಸ್ತಿಗಳನ್ನು ಅವರು ಗೆದ್ದುಕೊಂಡಿದ್ದಾರೆ.
ವೆಲೈಂಟೈನ್ ಡಿಸೋಜ ಅವರ ಸಾಧನೆಗಳು:
ಪಣಂಬೂರು ಠಾಣಾ ವ್ಯಾಪ್ತಿಯ ಜೋಕಟ್ಟೆಯ ಪ್ರಾರ್ಥನಾ ಮಂದಿರವೊಂದರಲ್ಲಿ ಪ್ರಾಣಿಯೊಂದರ ತಲೆ ಕಡಿದು ಎಸೆಯಲಾಗಿದ್ದು, ಇದನ್ನು ವೆಲೈಂಟೈನ್ ಡಿಸೋಜ ಅವರು ತಮ್ಮ ವಾಹನದಲ್ಲಿರಿಸಿಕೊಂಡು, ಪ್ರಾಣಿಗಳನ್ನು ವಧೆ ಮಾಡುತ್ತಿದ್ದ ಸ್ಥಳ ಪತ್ತೆ ಹಚ್ಚಿ ಕ್ರಮ ಕೈಗೊಳ್ಳುವಲ್ಲಿ ಯಶಸ್ವಿಯಾಗಿದ್ದರು.
ಭೂಗತ ಪಾತಕಿ ವಿಕ್ಕಿ ಅಲಿಯಾಸ್ ಬಾಲಕೃಷ್ಣ ಶೆಟ್ಟಿಯ 27 ಸಹಚರರನ್ನು ವೆಲೈಂಟೈನ್ ಅವರು ಬಂಧಿಸಿ ಮೂರು ಪಿಸ್ತೂಲ್ ಮತ್ತು 12 ಸಜೀವ ಮದ್ದುಗುಂಡುಗಳನ್ನು ವಶಪಡಿಸಿಕೊಂಡಿದ್ದಾರೆ. ಮಂಗಳೂರು ನಗರವನ್ನೇ ಬೆಚ್ಚಿ ಬೀಳಿಸಿದ್ದ ಕೊಣಾಜೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಕಾರ್ತಿಕ್ ರಾಜ್ ಹತ್ಯೆಯನ್ನು ಬಯಲಿಗೆಳೆಯುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು.
ವೆಲೈಂಟೈನ್ ಅನೇಕ ಯುವ ಸಂಸ್ಥೆಗಳು ಮತ್ತು ಕ್ರೀಡಾ ಕ್ಲಬ್ಗಳಿಗೆ ಭೇಟಿ ನೀಡಿದ್ದು, ಕ್ರೀಡೆಯ ಮಹತ್ವ ಮತ್ತು ದುಶ್ಚಟಗಳಿಂದ ದೂರವಿರುವಂತೆ ಯುವಕರಿಗೆ ಸಲಹೆ ನೀಡಿದ್ದಾರೆ. ಕ್ರೀಡೆಯಲ್ಲಿರುವ ಪ್ರಾಮುಖ್ಯತೆಯನ್ನು ಅವರು ಯುವಜನತೆಗೆ ವಿವರಿಸಿದರು.
ಅವರು ಭಟ್ಕಳ್ ಉಪವಿಭಾಗದ ಅಧಿಕಾರವನ್ನು ವಹಿಸಿಕೊಂಡ ನಂತರ ವಿಧಾನಸಭಾ ಚುನಾವಣೆಗಳು ಮತ್ತು ಲೋಕಸಭಾ ಚುನಾವಣೆಗಳು ನಡೆದವು. ಈ ಚುನಾವಣೆಗಳಲ್ಲಿ ಪ್ರಚಾರ ಅಥವಾ ಮತದಾನದ ಸಮಯದಲ್ಲಿ ಒಂದೇ ಒಂದು ಅಹಿತಕರ ಘಟನೆ ವರದಿಯಾಗದಿರುವುದು, ಇವರ ಸಾರ್ಥಕ ಸೇವೆಗೆ ಸಂದಿರುವ ಗೌರವವಾಗಿದೆ. ಹಿಂದೂಗಳು ಮತ್ತು ಮುಸ್ಲಿಮರ ನಡುವೆ ಅತ್ಯುತ್ತಮ ಕೋಮು ಸೌಹಾರ್ದತೆಯನ್ನು ಕಾಪಾಡುವಲ್ಲಿ ಅವರ ಪಾತ್ರವನ್ನು ಪ್ರಮುಖವಾಗಿದ್ದು, ಭಟ್ಕಳದ ಜನತೆಯ ಪ್ರೀತಿ ಪಾತ್ರರಾಗಿದ್ದಾರೆ.
ಬಾಡಿ ಬಿಲ್ಡಿಂಗ್ ನಲ್ಲಿ ಮಾಡಿದ ಸಾಧನೆಗಾಗಿ ವೆಲೈಂಟೈನ್ ಅನೇಕ ಪುರಸ್ಕಾರಗಳನ್ನು ಗೆದ್ದಿದ್ದಾರೆ. ಅವರು 1987 ರಲ್ಲಿ ಶ್ರೀ ದುರ್ಗಾ ಪ್ರಶಸ್ತಿ, 1988 ರಲ್ಲಿ ಶ್ರೀ ಶಿವಪ್ಪ ನಾಯ್ಕಾ ಪ್ರಶಸ್ತಿ, 1988 ರಲ್ಲಿ ಶ್ರೀ ಪುಲಕೇಶಿ ಪ್ರಶಸ್ತಿ, 1988 ರಿಂದ 1990 ರವರೆಗೆ ಸತತ ಮೂರು ವರ್ಷಗಳ ಕಾಲ ಮುಕ್ತ ರಾಜ್ಯ ಚಿನ್ನದ ಪದಕ ಮತ್ತು 1991 ರಲ್ಲಿ ಭಾರತ್ ಕಿಶೋರ್ ಅಖಿಲ ಭಾರತ ಪ್ರಶಸ್ತಿಯನ್ನು ಗೆದ್ದಿದ್ದಾರೆ. ಅವರು ಸ್ಪರ್ಧಿಸಲು ಆಯ್ಕೆಯಾದರು ಫಿಲಿಪೈನ್ಸ್ನಲ್ಲಿ ನಡೆದ ಬಾಡಿ ಬಿಲ್ಡಿಂಗ್ ಸ್ಪರ್ಧೆಯಲ್ಲಿ ಭಾಗವಹಿಸಿದ ನಂತರ ವಿಶ್ವಮಟ್ಟದ ಬಾಡಿ ಬಿಲ್ಡಿಂಗ್ ಸ್ಪರ್ಧೆಗಾಗಿ ಅವರಿಗೆ 2016 ರಲ್ಲಿ ಸಾಗರ್ನಲ್ಲಿ 'ಮಲ್ನಾಡ್ ಕ್ರೀಡಾ ರತ್ನ' ಪ್ರಶಸ್ತಿಯನ್ನು ನೀಡಲಾಯಿತು. ಅವರು ನವೆಂಬರ್ 2017 ರಲ್ಲಿ ಯುಎಸ್ಎದ ಲಾಸ್ ವೇಗಾಸ್ ನಲ್ಲಿ ನಡೆದ ಬಾಡಿ ಬಿಲ್ಡಿಂಗ್ ಸ್ಪರ್ಧೆಯಲ್ಲಿ ಸ್ಪರ್ಧಿಸಿ ಅಂತಿಮ ಸುತ್ತು ಪ್ರವೇಶಿಸಿದರು.
ಇನ್ನು ಇವರು 2008ರಲ್ಲಿ ಉಡುಪಿ ಜಿಲ್ಲಾ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, 2009ರಲ್ಲಿ ಮುಖ್ಯಮಂತ್ರಿ ಸ್ವರ್ಣ ಪದಕ, 2017ರಲ್ಲಿ ಪೇಜಾವರ ಶ್ರೀಗಳಿಂದ ಉಪಾಧ್ಯಾಯ ಸನ್ಮಾನ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.