ಮಂಗಳೂರು, ಆ 02 (Daijiworld News/SM): ಆಗಸ್ಟ್ 12ರಂದು ಬಕ್ರೀದ್ ಹಬ್ಬವನ್ನು ಆಚರಿಸಲಾಗುವುದು ಎಂದು ದಕ್ಷಿಣ ಕನ್ನಡ ಜಿಲ್ಲಾ ಖಾಝಿ ತ್ವಾಖಾ ಅಹ್ಮದ್ ಮುಸ್ಲಿಯಾರ್ ತಿಳಿಸಿದ್ದಾರೆ.
ಇಸ್ಲಾಮೀ ಕ್ಯಾಲೆಂಡರ್ನ ದುಲ್ಹಜ್ಜ್ ತಿಂಗಳ ಚಂದ್ರದರ್ಶನ ಶುಕ್ರವಾರ ರಾತ್ರಿ ಆಗಿದೆ. ಆಗಸ್ಟ್ 3ರಂದು ದುಲ್ಹಜ್ಜ್ ಒಂದು ಆಗಿದೆ. ದುಲ್ಹಜ್ಜ್ ತಿಂಗಳ 10ರಂದು ಬಕ್ರೀದ್ ಹಬ್ಬ ಆಚರಿಸಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.
ಬಕ್ರೀದ್ ತ್ಯಾಗ ಬಲಿದಾನದ ಸಂಕೇತವಾಗಿದೆ. ಭಾರತ ಸೇರಿದಂತೆ ವಿಶ್ವದ್ಯಾಂತ ಮುಸ್ಲಿಮರು ಈ ಹಬ್ಬವನ್ನು ಭಕ್ತಿ ಶ್ರದ್ಧೆಯಿಂದ ಆಚರಿಸುತ್ತಾರೆ. ಪ್ರವಾದಿಗಳಲ್ಲೊಬ್ಬರಾದ ಪ್ರವಾದಿ ಇಬ್ರಾಹಿಮರು ತಮ್ಮ ಮಗನಾದ ಇಸ್ಮಾಯಿಲ್ರನ್ನು ಸೃಷ್ಟಿಕರ್ತ ಅಲ್ಲಾಹನಿಗೆ ಬಲಿ ಕೊಡಲು ಮುಂದಾದ ದಿನವನ್ನು ಬಕ್ರೀದ್ ಎಂದು ಆಚರಿಸಲಾಗುತ್ತಿದೆ.
ಆದರೆ, ಬಕ್ರೀದ್ ಸಂದರ್ಭದಲ್ಲಿ ಶಕ್ತ ಮುಸ್ಲಿಮರು, ಇಸ್ಲಾಂ ಧರ್ಮದ ಐದು ಪ್ರಮುಖ ಕರ್ತವ್ಯಗಳಲ್ಲೊಂದಿಗೆ ಪವಿತ್ರ ಹಜ್ಜ್ ಯಾತ್ರೆ ಕೈಗೊಳ್ಳುತ್ತಾರೆ. ಪ್ರವಾದಿ ಮಹಮ್ಮದರ ಕರ್ಮಭೂಮಿಯಾಗಿದ್ದ ಸೌದಿ ಅರೆಬಿಯಾದ ಮೆಕ್ಕಾ ಮತ್ತು ಮದೀನ ಪಟ್ಟಣಗಳಲ್ಲಿರುವ ಪವಿತ್ರ ಯಾತ್ರಾ ಸ್ಥಳಗಳ ದರ್ಶನ ಪಡೆದು ಧಾರ್ಮಿಕ ವಿಧಿ ವಿಧಾನಗಳನ್ನು ಪೂರೈಸಿ ಬರುತ್ತಾರೆ. ಈ ಪೈಕಿ ಪವಿತ್ರ ಯಾತ್ರಾ ಸ್ಥಳವಾದ ಕಾಬಾದ ದರ್ಶನ ಹಾಗೂ ಕೆಟ್ಟಗುಣಗಳ ಸಂಕೇತವಾದ ಸೈತಾನನಿಗೆ ಸಾಂಕೇತಿಕವಾಗಿ ಕಲ್ಲು ಹೊಡೆಯುವ ಸಂಪ್ರದಾಯವನ್ನು ಕೂಡ ನಡೆಸಿಕೊಂಡು ಬರಲಾಗಿದೆ.