ನವದೆಹಲಿ, ಫೆ. 26 (DaijiworldNews/AA): ನ್ಯಾಯಾಂಗದಲ್ಲಿ ಭ್ರಷ್ಟಾಚಾರದ ಬಗ್ಗೆ ಉಲ್ಲೇಖಿಸಿರುವ ರಾಷ್ಟ್ರೀಯ ಶಿಕ್ಷಣ ಸಂಶೋಧನ ಮತ್ತು ತರಬೇತಿ ಮಂಡಳಿಯ 8ನೇ ತರಗತಿಯ ಸಾಮಾಜಿಕ ವಿಜ್ಞಾನ ಪಠ್ಯಪುಸ್ತಕದ ಮೇಲೆ ಸುಪ್ರೀಂ ಕೋರ್ಟ್ ಸಂಪೂರ್ಣ ನಿಷೇಧಿಸಿದೆ.

ಈ ಪುಸ್ತಕದಲ್ಲಿ 'ನ್ಯಾಯಾಂಗದಲ್ಲಿ ಭ್ರಷ್ಟಾಚಾರ' ಎಂಬ ಭಾಗವನ್ನು ಸೇರಿಸಿರುವುದನ್ನು ಕೋರ್ಟ್ ಆಳವಾದ ಒಳಸಂಚು ಎಂದು ತೀವ್ರವಾಗಿ ಖಂಡಿಸಿದೆ. ಈ ಬಗ್ಗೆ ಸ್ವಯಂ ಪ್ರೇರಿತವಾಗಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ನೇತೃತ್ವದ ಪೀಠವು, ಪುಸ್ತಕದ ಭೌತಿಕ ಹಾಗೂ ಡಿಜಿಟಲ್ ನಕಲುಗಳನ್ನು ತಕ್ಷಣ ಸ್ವಾಧೀನಪಡಿಸಿಕೊಳ್ಳುವಂತೆ ಆದೇಶಿಸಿದೆ.
ಪುಸ್ತಕದ ಮುದ್ರಣ, ಮರುಮುದ್ರಣ, ಡಿಜಿಟಲ್ ಹಂಚಿಕೆ ಅಥವಾ ಯಾವುದೇ ರೂಪದಲ್ಲಿ ಹಂಚಿಕೊಳ್ಳುವುದನ್ನು ಸಂಪೂರ್ಣವಾಗಿ ನಿಷೇಧಿಸಿದೆ. ಉಲ್ಲಂಘಿಸಿದರೆ ನ್ಯಾಯಾಲಯದ ಆದೇಶ ಉಲ್ಲಂಘನೆ ಎಂದು ಪರಿಗಣಿಸಲಾಗುವುದು ಎಂದು ಎಚ್ಚರಿಕೆ ನೀಡಿದೆ.
ಕೇಂದ್ರ ಸರ್ಕಾರದ ಪರವಾಗಿ ಹಾಜರಾದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಬೇಷರತ್ ಕ್ಷಮೆ ಕೇಳಿದರು. ಈ ಅಧ್ಯಾಯ ರಚನೆಯಲ್ಲಿ ಭಾಗಿಯಾಗಿದ್ದವರನ್ನು ಯುಜಿಸಿ ಅಥವಾ ಯಾವುದೇ ಸಚಿವಾಲಯದೊಂದಿಗೆ ಮುಂದೆ ಕೆಲಸ ಮಾಡಲು ಅವಕಾಶ ನೀಡದಂತೆ ಮಾಡಲಾಗುವುದು. ಈಗಾಗಲೇ 32 ಪ್ರತಿಗಳು ಮಾರಾಟವಾಗಿದ್ದು, ಪುಸ್ತಕವನ್ನು ಹಿಂಪಡೆಯಲಾಗಿದೆ ಎಂದು ತಿಳಿಸಿದರು.