ಬೆಂಗಳೂರು, ಫೆ. 26 (DaijiworldNews/TA): ಮಾರ್ಚ್ ತಿಂಗಳಲ್ಲಿ ಆರಂಭವಾಗಲಿರುವ ಪಿಯುಸಿ ಹಾಗೂ ಎಸ್ಸೆಸ್ಸೆಲ್ಸಿ ಪರೀಕ್ಷೆಗಳ ಹಿನ್ನೆಲೆ ವಿದ್ಯಾರ್ಥಿಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಪರೀಕ್ಷಾ ಭಯವನ್ನು ನಿವಾರಿಸಲು ಗೃಹ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಜಿ. ಪರಮೇಶ್ವರ್ ಅವರು ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ವಿಶೇಷ ಪತ್ರ ಬರೆದು ಧೈರ್ಯ ತುಂಬಿದ್ದಾರೆ. ಶಿಕ್ಷಣವು ಸಮಾನತೆ ಹಾಗೂ ಸ್ವಾಭಿಮಾನಕ್ಕೆ ಅಸ್ತ್ರ ಎಂದು ಅವರು ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದು, ವಿದ್ಯಾರ್ಥಿಗಳು ಆತ್ಮವಿಶ್ವಾಸದಿಂದ ಪರೀಕ್ಷೆಗಳನ್ನು ಎದುರಿಸಬೇಕು ಎಂದು ಕರೆ ನೀಡಿದ್ದಾರೆ.

“ಸಮಾನತೆ ಹಾಗೂ ಸ್ವಾಭಿಮಾನಕ್ಕೆ ಶಿಕ್ಷಣವೇ ಅಸ್ತ್ರ” ಎಂಬ ಬಿ.ಆರ್ ಅಂಬೇಡ್ಕರ್ ಅವರ ಮಾತುಗಳನ್ನು ಸ್ಮರಿಸಿರುವ ಸಚಿವರು, ಶಿಕ್ಷಣದ ಮೂಲಕವೇ ವ್ಯಕ್ತಿತ್ವ ರೂಪುಗೊಳ್ಳುತ್ತದೆ ಮತ್ತು ಬದುಕು ಸುಧಾರಿಸುತ್ತದೆ ಎಂದು ಹೇಳಿದ್ದಾರೆ. ಪರೀಕ್ಷೆಯನ್ನು ಜೀವನದ ಅಂತಿಮ ಗುರಿಯಂತೆ ಕಾಣಬಾರದ, ಅದು ಭವಿಷ್ಯದತ್ತ ಸಾಗುವ ಒಂದು ಹಂತ ಮಾತ್ರ ಎಂಬ ಸಂದೇಶವನ್ನು ಅವರು ವಿದ್ಯಾರ್ಥಿಗಳಿಗೆ ನೀಡಿದ್ದಾರೆ.
“ಸೋಲು ಅಂತ್ಯವಲ್ಲ, ಯಶಸ್ಸು ಅಂತಿಮವಲ್ಲ, ಧೈರ್ಯವೇ ನಿಜವಾದ ವಿಜಯ” ಎಂದು ಹೇಳುವ ಮೂಲಕ ಸೋಲು-ಗೆಲುವನ್ನು ಸಮಾನವಾಗಿ ಸ್ವೀಕರಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಸಚಿವರು ಸಲಹೆ ನೀಡಿದ್ದಾರೆ. ಪರೀಕ್ಷೆಯಲ್ಲಿ ಫಲಿತಾಂಶ ಏನೇ ಆಗಿದ್ದರೂ ಅದು ಬದುಕಿನ ಸಂಪೂರ್ಣ ಚಿತ್ರವಲ್ಲ, ಪರಿಶ್ರಮ ಮತ್ತು ಧೈರ್ಯವೇ ವ್ಯಕ್ತಿಯನ್ನು ಯಶಸ್ಸಿನತ್ತ ಕೊಂಡೊಯ್ಯುತ್ತವೆ ಎಂದು ಅವರು ಉಲ್ಲೇಖಿಸಿದ್ದಾರೆ.
ಮಕ್ಕಳ ಮೇಲೆ ಅಂಕಗಳ ಒತ್ತಡ ಹೇರುವುದನ್ನು ತಪ್ಪಿಸಬೇಕು ಎಂದು ಪೋಷಕರಲ್ಲಿ ವಿಶೇಷ ಮನವಿ ಮಾಡಿರುವ ಸಚಿವರು, “ಮಕ್ಕಳ ಪ್ರಯತ್ನಕ್ಕೆ ಬೆಂಬಲ ನೀಡಿ, ಅವರ ಬೆನ್ನೆಲುಬಾಗಿ ನಿಲ್ಲಿ” ಎಂದು ಕೋರಿದ್ದಾರೆ. ವಿದ್ಯಾರ್ಥಿಗಳ ಮಾನಸಿಕ ಆರೋಗ್ಯ ಕಾಪಾಡುವುದು ಎಲ್ಲರ ಜವಾಬ್ದಾರಿ ಎಂದು ಅವರು ಹೇಳಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಪರೀಕ್ಷಾ ಒತ್ತಡದಿಂದ ವಿದ್ಯಾರ್ಥಿಗಳು ಮಾನಸಿಕ ಖಿನ್ನತೆಗೆ ಒಳಗಾಗುತ್ತಿರುವ ಘಟನೆಗಳನ್ನು ಗಮನಿಸಿ, ಅವರಿಗೆ ನೈತಿಕ ಬೆಂಬಲ ನೀಡುವ ಉದ್ದೇಶದಿಂದ ಜಿಲ್ಲೆಯ ಪ್ರತಿಯೊಬ್ಬ ಪಿಯುಸಿ ವಿದ್ಯಾರ್ಥಿಗೂ ತಲುಪುವಂತೆ ಈ ಪತ್ರ ಬರೆಯಲಾಗಿದೆ. ತ್ರಿವಿಧ ದಾಸೋಹಿಗಳ ನಾಡು ಎಂದೇ ಪ್ರಸಿದ್ಧವಾದ ಸಿದ್ದಗಂಗಾ ಮಠ ಪ್ರದೇಶದ ಮಕ್ಕಳು ಶಿಕ್ಷಣದಲ್ಲಿ ಮತ್ತಷ್ಟು ಮುನ್ನಡೆ ಸಾಧಿಸಲಿ ಹಾಗೂ ಎಲ್ಲರಿಗೂ ಯಶಸ್ಸು ಸಿಗಲಿ ಎಂದು ಸಚಿವರು ಹಾರೈಸಿದ್ದಾರೆ.