ಅರಾರಿಯಾ, ಫೆ. 26 (DaijiworldNews/TA): ಪಶ್ಚಿಮ ಬಂಗಾಳದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಮುನ್ನ ಬಿಹಾರದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು, “ನರೇಂದ್ರ ಮೋದಿ ಸರ್ಕಾರವು ಪ್ರತಿಯೊಬ್ಬ ನುಸುಳುಕೋರರನ್ನು ಭಾರತೀಯ ನೆಲದಿಂದ ತೆಗೆದುಹಾಕಲು ದೃಢನಿಶ್ಚಯ ಹೊಂದಿದೆ” ಎಂದು ಘೋಷಿಸಿದರು.

ಬಿಹಾರದ ಅರಾರಿಯಾದಲ್ಲಿ ನಡೆದ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು, “ಒಳನುಸುಳುಕೋರರಿಂದ ಮುಕ್ತಿ ಎಂದರೆ ಕೇವಲ ಮತದಾರರ ಪಟ್ಟಿಯಿಂದ ಹೆಸರು ತೆಗೆದುಹಾಕುವುದಲ್ಲ. ಭಾರತದ ನೆಲದಿಂದ ಪ್ರತಿಯೊಬ್ಬ ನುಸುಳುಕೋರರನ್ನು ಹೊರಹಾಕಲು ಸಮಗ್ರ ಕಾರ್ಯಕ್ರಮವನ್ನು ಜಾರಿಗೆ ತರುತ್ತೇವೆ. ಈ ಬಾರಿಯ ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಬಿಜೆಪಿ ಗೆಲ್ಲುತ್ತದೆ” ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಪಶ್ಚಿಮ ಬಂಗಾಳದಲ್ಲಿ ಹೊಸ ಸರ್ಕಾರ ರಚನೆಯಾದ ಬಳಿಕ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ ಅಮಿತ್ ಶಾ, “ಬಿಜೆಪಿ ಅಧಿಕಾರಕ್ಕೆ ಬಂದ ತಕ್ಷಣ ದೇಶ ಬಿಟ್ಟು ಹೋಗುವಂತೆ ಪ್ರತಿಯೊಬ್ಬ ನುಸುಳುಕೋರರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ” ಎಂದರು.
ಬಿಹಾರದ ಸೀಮಾಂಚಲ್ ಪ್ರದೇಶದಲ್ಲಿ ಒಳನುಸುಳುವಿಕೆ ವಿರುದ್ಧ ವಿಶೇಷ ಅಭಿಯಾನ ಆರಂಭವಾಗಲಿದೆ ಎಂದು ಹೇಳಿದ ಅವರು, “ಒಳನುಸುಳುವಿಕೆ ಒಂದು ದೊಡ್ಡ ರಾಷ್ಟ್ರೀಯ ಭದ್ರತಾ ಸವಾಲು. ಇದು ಜನಸಂಖ್ಯಾ ಸಮತೋಲನವನ್ನು ಅಡ್ಡಿಪಡಿಸುತ್ತದೆ ಹಾಗೂ ಸಾರ್ವಜನಿಕ ಕಲ್ಯಾಣ ಯೋಜನೆಗಳ ಮೇಲೆ ಒತ್ತಡ ತರುತ್ತದೆ” ಎಂದು ಹೇಳಿದರು.
“ಇಡೀ ದೇಶವನ್ನು ನುಸುಳುಕೋರರಿಂದ ಮುಕ್ತಗೊಳಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಬದ್ಧವಾಗಿದೆ. ಶೀಘ್ರದಲ್ಲೇ ಸೀಮಾಂಚಲ್ ಪ್ರದೇಶದಾದ್ಯಂತ ಈ ಉಪಕ್ರಮ ಆರಂಭವಾಗಲಿದೆ” ಎಂದು ಅವರು ತಿಳಿಸಿದರು.
ಬಾಂಗ್ಲಾದೇಶ–ನೇಪಾಳ ಗಡಿಯಲ್ಲಿರುವ ಬಿಹಾರದ ಕಿಶನ್ಗಂಜ್, ಅರಾರಿಯಾ, ಪೂರ್ಣಿಯಾ ಹಾಗೂ ಕತಿಹಾರ್ ಜಿಲ್ಲೆಗಳನ್ನು ಒಳಗೊಂಡ ಸೀಮಾಂಚಲ್ ಪ್ರದೇಶದಲ್ಲಿ ಅಮಿತ್ ಶಾ ಮೂರು ದಿನಗಳ ಪ್ರವಾಸ ಆರಂಭಿಸಿದ್ದು, ಗಡಿ ಭದ್ರತೆ ಹಾಗೂ ಅಕ್ರಮ ವಲಸೆ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಕುರಿತು ಚರ್ಚೆಗಳು ನಡೆಯಲಿವೆ ಎಂದು ತಿಳಿದುಬಂದಿದೆ.