ನವದೆಹಲಿ, ಫೆ. 26 (DaijiworldNews/AA): ಏಪ್ರಿಲ್ 1 ರಿಂದ ದೇಶದಲ್ಲಿರುವ ಎಲ್ಲಾ ಪೆಟ್ರೋಲ್ ಬಂಕ್ಗಳು ಕಡ್ಡಾಯವಾಗಿ 20% ಎಥೆನಾಲ್ ಮಿಶ್ರಿತ ಪೆಟ್ರೋಲ್ ಮಾರಾಟ ಮಾಡಬೇಕೆಂದು ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ.

ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ ವಿಶೇಷಣಗಳ ಪ್ರಕಾರ ಮತ್ತು ರಿಸರ್ಚ್ ಆಕ್ಟೇನ್ ನಂಬರ್ (RON) 95 ಅನ್ನು ಹೊಂದಿರುವ 20% ಎಥೆನಾಲ್ ಮಿಶ್ರಿತ ಪೆಟ್ರೋಲ್ ಮಾರಾಟ ಮಾಡಬೇಕು ಎಂದು ಫೆ. 17 ರಂದು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ ಅಧಿಸೂಚನೆ ಪ್ರಕಟಿಸಿದೆ.
RON ಎಥೆನಾಲ್ ಮಿಶ್ರಿತ ಇಂಧನಗಳಲ್ಲಿ ಎಂಜಿನ್ ಕಾರ್ಯಕ್ಷಮತೆಯನ್ನು ಅಳೆಯುವ ಪ್ರಮುಖ ಮಾನದಂಡವಾಗಿದೆ. ಎಥೆನಾಲ್ ನೈಸರ್ಗಿಕವಾಗಿ ಸುಮಾರು 108 RON ಗಿಂತಲೂ ಹೆಚ್ಚಿನ ಆಕ್ಟೇನ್ ರೇಟಿಂಗ್ ಹೊಂದಿದೆ. ಈ ಎಥೆನಾಲ್ನ್ನು ಪೆಟ್ರೋಲ್ಗೆ ಮಿಶ್ರಣ ಮಾಡಿದರೆ ಭವಿಷ್ಯದಲ್ಲಿ ಎಂಜಿನ್ಗೆ ಸಮಸ್ಯೆಯಾಗುವ ಸಾಧ್ಯತೆಯಿದೆ. ಈ ಕಾರಣಕ್ಕೆ ಕೇಂದ್ರ ಸರ್ಕಾರ RON 95 ಹೊಂದಿರುವ 20% ಎಥೆನಾಲ್ ಮಿಶ್ರಿತ ಪೆಟ್ರೋಲ್ ಮಾರಾಟಕ್ಕೆ ಒಪ್ಪಿಗೆ ಸೂಚಿಸಿದೆ.
2003ಕ್ಕೆ ಮೊದಲು ಭಾರತದಲ್ಲಿ ಕಚ್ಚಾ ತೈಲದಿಂದ ಸಂಸ್ಕರಣೆಗೊಂಡ ಪೆಟ್ರೋಲ್ ಬಂಕ್ಗಳಿಗೆ ಬರುತ್ತಿದ್ದವು. ಆದರೆ ಈಗ ಪೆಟ್ರೋಲ್ ಜೊತೆ ಎಥೆನಾಲ್ ಮಿಶ್ರಣವಾಗಿರುವ ಇಂಧನ ಬರುತ್ತಿದೆ. 20% ಎಥೆನಾಲ್ ಮತ್ತು 80% ಬಾಕಿ ಪೆಟ್ರೋಲ್ ಮಿಶ್ರಿತ ತೈಲವನ್ನು ಇ20 ತೈಲ ಎಂದು ಕರೆಯಲಾಗುತ್ತದೆ. ಕಬ್ಬು, ಜೋಳ ಅಥವಾ ಹೆಚ್ಚುವರಿ ಧಾನ್ಯದಿಂದ ತಯಾರಿಸಲಾದ ಜೈವಿಕ ಇಂಧನವನ್ನು ಎಥೆನಾಲ್ ಎನ್ನಲಾಗುತ್ತದೆ.