ಶ್ರೀನಗರ, ಆ.03(Daijiworld News/SS): ಕಳೆದೊಂದು ವಾರದಿಂದ ಜಮ್ಮು-ಕಾಶ್ಮೀರದಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ತೀವ್ರ ಕುತೂಹಲದ ಜತೆಗೆ ಆತಂಕವನ್ನೂ ಹೆಚ್ಚಿಸಿದೆ. ಕೇಂದ್ರ ಗೃಹ ಸಚಿವ ಅಮಿತ್ ಷಾ ಹಾಗೂ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಭೇಟಿ ಕೊಟ್ಟ ಬಳಿಕ ಜಮ್ಮು-ಕಾಶ್ಮೀರದಲ್ಲಿ ಬರೋಬ್ಬರಿ 38 ಸಾವಿರ ಯೋಧರನ್ನು ನಿಯೋಜಿಸಲಾಗಿದೆ.
ಕಣಿವೆ ರಾಜ್ಯ ಜಮ್ಮು ಕಾಶ್ಮೀರದಲ್ಲಿ ಉಗ್ರ ಚಟುವಟಿಕೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ, ಅದರಲ್ಲೂ ಅಮರನಾಥ ಯಾತ್ರಿಕರನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುವ ಸಂಚು ನಡೆದಿದೆ ಎಂಬ ಮಾಹಿತಿ ಮೇರೆಗೆ ಅಮರನಾಥ ಯಾತ್ರೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಅಮರನಾಥ ಯಾತ್ರಿಕರು ಸೇರಿದಂತೆ ಅಮಾಯಕರ ಹತ್ಯೆಗೆ ಪಾಕ್ ಮೂಲದ ಉಗ್ರರು ರೂಪಿಸಿರುವ ಸಂಚು ತಡೆಯುವುದು ಈ ನಡೆಯ ಉದ್ದೇಶ ಎಂಬುದಾಗಿ ಸೇನಾಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ.
ಅಮರನಾಥ ಯಾತ್ರಿಕರ ಮೇಲೆ ಭಯೋತ್ಪಾದಕ ದಾಳಿ ನಡೆಯುವ ಮುನ್ಸೂಚನೆ ದೊರೆತಿದೆ. ಹೀಗಾಗಿ ಕಣಿವೆ ರಾಜ್ಯದಲ್ಲಿರುವ ಪ್ರವಾಸಿಗರಿಗೆ ಕೂಡಲೇ ವಾಪಸ್ ತೆರಳುವಂತೆ ಗೃಹ ಸಚಿವಾಲಯ ಮುನ್ನೆಚ್ಚರಿಕೆ ನೀಡಿದೆ. ಇದರ ಬೆನ್ನಲ್ಲೇ ಕಾಶ್ಮೀರದ ಕೆಲ ಭಾಗಗಳಲ್ಲಿನ ಹೋಟೆಲ್ಗಳಿಂದಲೂ ಪ್ರವಾಸಿಗರನ್ನು ಖಾಲಿ ಮಾಡಿಸಿ ಬಸ್ ಮೂಲಕ ಜಮ್ಮು ಭಾಗಕ್ಕೆ ಕಳುಹಿಸಲಾಗುತ್ತಿದೆ.
ಅಮರನಾಥ ಯಾತ್ರೆ ಸಾಗುವ ಮಾರ್ಗಗಳಲ್ಲಿ ವಿದೇಶಿ ಶಸ್ತ್ರಾಸ್ತ್ರಗಳನ್ನು ಸೇನಾ ಯೋಧರು ವಶಪಡಿಸಿಕೊಂಡಿದ್ದಾರೆ. ಅಮೆರಿಕದ ಯುಎಸ್ ಎಂ-24 ಸ್ನೈಪರ್ ರೈಫಲ್ ವಶಪಡಿಸಿಕೊಳ್ಳಲಾಗಿದೆ. ಇದು ಪಾಕಿಸ್ತಾನದ ಶಸ್ತ್ರಾಸ್ತ್ರ ಘಟಕದ ಚಿಹ್ನೆ ಹೊಂದಿರುವುದು ಪತ್ತೆಯಾಗಿದೆ. ಹೀಗಾಗಿ ಅಮರನಾಥ ಯಾತ್ರಿಕರನ್ನು ಕೂಡಲೇ ಜಮ್ಮು ಕಾಶ್ಮೀರ ಬಿಟ್ಟು ತೆರಳುವಂತೆ ಸೂಚಿಸಲಾಗಿದೆ. ಈ ಸಂಬಂಧ ಗೃಹ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಸೂಚನೆ ನೀಡಿದ್ದಾರೆ. ಯಾತ್ರಿಕರು ಎಲ್ಲಿದ್ದರೂ ಅತಿ ಶೀಘ್ರವಾಗಿಯೇ ಸುರಕ್ಷಿತ ಸ್ಥಳಗಳಿಗೆ ಸಾಧ್ಯವಾದರೆ ಕಾಶ್ಮೀರ ಬಿಟ್ಟು ಸ್ವಂತ ಊರುಗಳಿಗೆ ತೆರಳಿದರೆ ಒಳಿತು ಎಂದು ತಿಳಿಸಲಾಗಿದೆ.