ಜಾರ್ಖಂಡ್, ಫೆ. 27 (DaijiworldNews/TA): ಪ್ರೀತಿಗಾಗಿ ಪೋಷಕರನ್ನು ಬಿಟ್ಟು ಬಂದಿದ್ದ ಗರ್ಭಿಣಿ ಮಹಿಳೆಯನ್ನು ಆಕೆಯ ಪ್ರಿಯಕರನೇ ಕೊಲೆ ಮಾಡಲು ಯತ್ನಿಸಿರುವ ಹೃದಯವಿದ್ರಾವಕ ಘಟನೆ ಜಾರ್ಖಂಡ್ನಲ್ಲಿ ಬೆಳಕಿಗೆ ಬಂದಿದೆ. ಗೋಲ್ಗಪ್ಪದಲ್ಲಿ ವಿಷ ಬೆರೆಸಿ ತಿನ್ನಿಸಿ ಬಳಿಕ ಕಾಡಿಗೆ ಕರೆದೊಯ್ದು ಹಲ್ಲೆ ನಡೆಸಿದ ಪ್ರಕರಣ ರಾಜ್ಯದಲ್ಲಿ ಆತಂಕ ಹುಟ್ಟಿಸಿದೆ.

26 ವರ್ಷದ ಸಾಕೇತ್ ಕೇಸರಿ ಹಾಗೂ 23 ವರ್ಷದ ಮಹಿಳೆ ಕಳೆದ 6 ವರ್ಷಗಳಿಂದ ಸಂಬಂಧದಲ್ಲಿದ್ದರು. ಒಂದು ವರ್ಷದ ಹಿಂದೆ ಇವರಿಗೆ ಮೊದಲ ಮಗು ಜನಿಸಿತ್ತು. ಗರ್ವಾ ಜಿಲ್ಲೆಯ ಸಮುದಾಯದ ಮಧ್ಯಸ್ಥಿಕೆಯಿಂದ ಇಬ್ಬರನ್ನೂ ಬೇರ್ಪಡಿಸಲಾಗಿತ್ತು. ಆದರೆ ಕೆಲವು ತಿಂಗಳ ಬಳಿಕ ಕೇಸರಿ ಮತ್ತೆ ಮಹಿಳೆಯನ್ನು ಸಂಪರ್ಕಿಸಿ ಮದುವೆಯ ಭರವಸೆ ನೀಡಿದ್ದಾನೆ. ನಂತರ ಮಹಿಳೆ ಮತ್ತೆ ಗರ್ಭಿಣಿಯಾಗಿದ್ದಾಳೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಫೆಬ್ರವರಿ 21ರಂದು ಮಧ್ಯಾಹ್ನ ಸುಮಾರು 2 ಗಂಟೆಗೆ ಕೇಸರಿ ಮಹಿಳೆಗೆ ಕರೆ ಮಾಡಿ ಏನಾದರೂ ತಿನ್ನಬೇಕೇ ಎಂದು ಕೇಳಿದ್ದಾನೆ. ಗೋಲ್ಗಪ್ಪ ತಿನ್ನುವ ಇಚ್ಛೆಯನ್ನು ಮಹಿಳೆ ವ್ಯಕ್ತಪಡಿಸಿದ್ದಾಳೆ. ಗೋಲ್ಗಪ್ಪ ತಿಂದ ಬಳಿಕ ಆಕೆಗೆ ತೀವ್ರ ವಾಂತಿ ಶುರುವಾಗಿ, ರಕ್ತವಾಂತಿ ಕೂಡ ಆಗಿದೆ.
ಸಂಜೆ ಸುಮಾರು 4 ಗಂಟೆಗೆ ಆರೋಪಿ ವೈದ್ಯರ ಬಳಿ ಕರೆದೊಯ್ಯುವ ನೆಪದಲ್ಲಿ ಮಹಿಳೆಯನ್ನು ತನ್ನ ಬೈಕ್ನಲ್ಲಿ ಕರೆದೊಯ್ದಿದ್ದಾನೆ. ಆದರೆ ವೈದ್ಯರ ಬಳಿಗೆ ಕರೆದೊಯ್ಯುವ ಬದಲು ಕಾಡಿನೊಳಗೆ ಸುಮಾರು 100 ಮೀಟರ್ ದೂರಕ್ಕೆ ಕರೆದೊಯ್ದು ಹಲ್ಲೆ ನಡೆಸಿದ್ದಾನೆ. ಕತ್ತು ಹಿಸುಕಲು ಯತ್ನಿಸಿದ ಪರಿಣಾಮ ಮಹಿಳೆಯ ಕಣ್ಣಿಗೆ ಗಂಭೀರ ಗಾಯವಾಗಿದ್ದು, ಆಕೆ ಪ್ರಜ್ಞೆ ತಪ್ಪಿದ್ದಾಳೆ.
ಪ್ರಜ್ಞೆ ಮರಳಿದ ಬಳಿಕ ಆಕೆ ಅಪಾರ ಭಯದ ನಡುವೆಯೇ ಕಾಡಿನ ಮತ್ತೊಂದು ತುದಿಗೆ ದಾಟಿ ರಾತ್ರಿಯಿಡೀ ಅಡಗಿ ಜೀವ ಉಳಿಸಿಕೊಂಡಿದ್ದಾಳೆ. ಮರುದಿನ ಬೆಳಗ್ಗೆ ಹೇಗೋ ತನ್ನ ಮನೆಗೆ ತಲುಪಿ ಕುಟುಂಬದವರಿಗೆ ನಡೆದ ಘಟನೆ ವಿವರಿಸಿದ್ದಾಳೆ. ಮಹಿಳೆಯ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಲಾಗಿದ್ದು, ಸಾಕೇತ್ ಕೇಸರಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ. ಪ್ರಕರಣದ ಬಗ್ಗೆ ಪೊಲೀಸರು ಸವಿಸ್ತಾರ ತನಿಖೆ ಮುಂದುವರಿಸಿದ್ದಾರೆ.