ಹೊಸದಿಲ್ಲಿ, ಆ.03(Daijiworld News/SS): ಚಂದ್ರಯಾನ - 2 ನೌಕೆ ಮತ್ತೊಂದು ಯಶಸ್ವಿ ಕಾರ್ಯಾಚರಣೆ ಪೂರ್ಣಗೊಳಿಸಿದೆ. ನೌಕೆಯ ಕಕ್ಷೆಯನ್ನು 4ನೇ ಬಾರಿಗೆ ಎತ್ತರಿಸುವ ಕಾರ್ಯ ಯಶಸ್ವಿಯಾಗಿದೆ ಎಂದು ಇಸ್ರೋ ಮೂಲಗಳು ತಿಳಿಸಿದೆ.
ಆ.02ರ ಮಧ್ಯಾಹ್ನ 3.27ರ ಸುಮಾರಿಗೆ ಈ ಕಾರ್ಯಾಚರಣೆ ಯಶಸ್ವಿಯಾಗಿದೆ. ಸಂಜೆಯವರೆಗೂ ಇದರ ನಿಗಾ ವಹಿಸಲಾಗಿತ್ತು. ನಂತರ ಇದು ಯಶಸ್ವಿಯಾಗಿರುವುದು ಪಕ್ಕಾ ಆಯಿತು ಎಂದು ಭಾರತೀಯ ಬಾಹ್ಯಾಕಾಶ ಸಂಸ್ಥೆ - ಇಸ್ರೋ ಸ್ಪಷ್ಟಪಡಿಸಿದೆ. ಚಂದ್ರಯಾನ - 2 ನೌಕೆಯ ಮೇಲೆ ಕಣ್ಗಾವಲು ಇಡಲಾಗಿದೆ. ಸಮರ್ಪಕ ರೀತಿಯಲ್ಲಿ ಪರಿಶೀಲಿಸಲಾಗುತ್ತಿದೆ ಎಂದು ಇಸ್ರೊ ತಿಳಿಸಿದೆ.
4 ಲಕ್ಷ ಕಿ.ಮೀ ದೂರದಲ್ಲಿರುವ ಚಂದ್ರನ ಮೇಲೆ ಲ್ಯಾಂಡರ್, ರೋವರ್ ಮತ್ತು ಆರ್ಬಿಟರ್ ಒಳಗೊಂಡ 3,850 ಕಿ.ಜಿ ತೂಕದ ಚಂದ್ರಯಾನ-2 ನೌಕೆಯನ್ನು ಚಂದ್ರನ ಮೇಲ್ಮೈ ಮೇಲೆ ಇಳಿಸಲು ಒಟ್ಟು 15 ಬಾರಿ ಎತ್ತರಿಸುವ, ಸರಿಯಾದ ದಿಕ್ಕಿನಲ್ಲಿ ಸಾಗುವಂತೆ ಸರಿಪಡಿಸುವ ಕಾರ್ಯವನ್ನು ಇಸ್ರೋ ನಡೆಸಲಿದೆ.
ಚಂದ್ರಯಾನ - 2 ಆಗಸ್ಟ್ 14ರಂದು ಕಕ್ಷೆ ಸೇರಲಿದ್ದು, ಆಗಸ್ಟ್ 20ರಂದು ಚಂದ್ರನ ಸುತ್ತ ಸುತ್ತಲಿದೆ. ಸೆಪ್ಟೆಂಬರ್ 7ರಂದು ಚಂದ್ರನ ಮೇಲೆ ಇಳಿಯಲಿದೆ. ಒಟ್ಟು 15 ಬಾರಿ ಚಂದ್ರಯಾನ - 2 ನೌಕೆ ಎತ್ತರಿಸುವ ಕಾರ್ಯ ನಡೆಯಲಿದೆ.