ಧಾರವಾಡ, ಫೆ. 27 (DaijiworldNews/TA): ಉದ್ಯೋಗಾಕಾಂಕ್ಷಿಗಳಿಗೆ ಉದ್ಯೋಗ ಕಲ್ಪಿಸುವಂತೆ ಮನವಿ ಮಾಡಿಕೊಂಡು, ವಿಪಕ್ಷ ಉಪನಾಯಕ ಹಾಗೂ ಹುಬ್ಬಳ್ಳಿ-ಧಾರವಾಡ ಪಶ್ಚಿಮ ಕ್ಷೇತ್ರದ ಶಾಸಕ ಅರವಿಂದ ಬೆಲ್ಲದ ಅವರು ಪ್ರಧಾನಿ ಮೋದಿ ಮತ್ತು ರಾಜ್ಯಪಾಲರಿಗೆ ಪತ್ರ ಬರೆದಿದ್ದಾರೆ.

ಅರವಿಂದ ಬೆಲ್ಲದ ಪತ್ರದಲ್ಲಿ ರಾಜ್ಯದಲ್ಲಿ ಓದುತ್ತಿರುವ ಉದ್ಯೋಗಾಕಾಂಕ್ಷಿಗಳ ನೋವನ್ನು ವಿವರಿಸಿ, ರಾಜ್ಯ ಸರ್ಕಾರ ಉದ್ಯೋಗ ನೀಡುವಲ್ಲಿ ವಿಫಲವಾಗಿದೆ ಎಂದು ತಿಳಿಸಿದ್ದಾರೆ. ಹೀಗಾಗಿ ಲಕ್ಷಾಂತರ ಯುವಕರು ಹತಾಶೆಯಿಂದ ಬೀದಿಗೆ ತೆರಳಿ ಪ್ರತಿಭಟನೆ ನಡೆಸುತ್ತಿದ್ದಾರೆ. ಧಾರವಾಡದಲ್ಲಿ ನಡೆದ ಪ್ರತಿಭಟನೆಯಲ್ಲಿ ಕೋಪ ವ್ಯಕ್ತವಾಗಿದ್ದು, ಅವರು ಯುವಕರ ಹಕ್ಕುಗಳಿಗಾಗಿ ಬೆಂಬಲ ವ್ಯಕ್ತಪಡಿಸಿದ್ದಾರೆ.
ಪತ್ರದಲ್ಲಿ ಅವರು ರಾಜ್ಯ ಸರ್ಕಾರ ಸಮರ್ಪಕ ಉತ್ತರ ನೀಡದೆ ಯುವಕರ ಮೇಲೆ ಲಾಠಿಚಾರ್ಜ್ ನಡೆಸಿರುವುದನ್ನು ಖಂಡಿಸಿ, “ಯುವಕರ ಪರಿಶ್ರಮಕ್ಕೆ ಫಲ ಸಿಗಬೇಕು, ಅವರ ಅನ್ಯಾಯ ನೋಡುತ್ತಾ ನಾವು ಸುಮ್ಮನಿರಲ್ಲ” ಎಂದು ಹೇಳಿದ್ದಾರೆ. ಅರವಿಂದ ಬೆಲ್ಲದ ಪತ್ರದ ನಂತರ, ರಾಜ್ಯ ಸರ್ಕಾರ 56,432 ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಲು ತೀರ್ಮಾನಿಸಿದೆ.