ನವದೆಹಲಿ, ಫೆ. 27 (DaijiworldNews/TA): ಮದ್ಯ ನೀತಿ ಹಗರಣ ಪ್ರಕರಣದಲ್ಲಿ ದೆಹಲಿ ರೌಸ್ ಅವೆನ್ಯೂ ನ್ಯಾಯಾಲಯವು ಮಾಜಿ ಮುಖ್ಯಮಂತ್ರಿ ಮತ್ತು ಆಮ್ ಆದ್ಮಿ ಪಕ್ಷದ (ಎಎಪಿ) ಸಂಚಾಲಕ ಅರವಿಂದ್ ಕೇಜ್ರಿವಾಲ್, ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಸೇರಿದಂತೆ ಇತರ ಆರೋಪಿಗಳನ್ನು ಖುಲಾಸೆಗೊಳಿಸಿದೆ.

ನ್ಯಾಯಾಲಯವು ಸಿಬಿಐ ಪ್ರಕರಣದ ವಿಚಾರಣೆ ನಡೆಸುತ್ತಿದ್ದು, ಸಾಕ್ಷ್ಯಾಧಾರಗಳ ಕೊರತೆಯಿಂದ ಆರೋಪಿಗಳನ್ನು ಖುಲಾಸೆಗೊಳಿಸಲಾಯಿತು. ವಿಶೇಷ ನ್ಯಾಯಾಧೀಶ ಜಿತೇಂದ್ರ ಸಿಂಗ್, “ಸಿಬಿಐ ಯಾವುದೇ ನಿರ್ದಿಷ್ಟ ಸಾಕ್ಷ್ಯಾಧಾರಗಳಿಲ್ಲದೆ ಇಬ್ಬರು ನಾಯಕರನ್ನು ಸಿಲುಕಿಸಿತು. ಪ್ರಕರಣದಲ್ಲಿ ಎಲ್ಲ 23 ಆರೋಪಿಗಳನ್ನು ಖುಲಾಸೆಗೊಳಿಸಲಾಗಿದೆ” ಎಂದು ಹೇಳಿದ್ದಾರೆ.
ಸಾವಿರ ಕೋಟಿ ಮೌಲ್ಯದ ಮದ್ಯ ಹಗರಣದ ಸಂಬಂಧದಲ್ಲಿ ಕೇಂದ್ರ ತನಿಖಾ ಸಂಸ್ಥೆಗಳು, ಜಾರಿ ನಿರ್ದೇಶನಾಲಯ ಮತ್ತು ಸಿಬಿಐ ತನಿಖೆ ನಡೆಸಿದರೂ, ಯಾವುದೇ ತಕ್ಕ ಸಾಕ್ಷ್ಯಗಳಿಲ್ಲದ ಕಾರಣ ನ್ಯಾಯಾಲಯವು ಚಾರ್ಜ್ಶೀಟ್ನ ನ್ಯೂನತೆಗಳನ್ನು ತೀವ್ರವಾಗಿ ಅಲ್ಲಗೆಳೆದಿದೆ ಎಂದು ವರದಿಯಾಗಿದೆ.