ಚೆನ್ನೈ, ಫೆ. 27 (DaijiworldNews/AK): ತಮಿಳುನಾಡಿನಲ್ಲಿ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ರಾಜಕೀಯದಲ್ಲಿ ಹಲವು ಬೆಳವಣಿಗಳು ನಡೆದಿದೆ. 3 ಬಾರಿ ತಮಿಳುನಾಡು ಸಿಎಂ ಆಗಿದ್ದ, ದಿ. ಜಯಲಲಿತಾ ಅವರ ಮೆಚ್ಚಿನ ಶಿಷ್ಯರಾಗಿದ್ದ ಒ. ಪನ್ನೀರ್ಸೆಲ್ವಂ ಇಂದು ಡಿಎಂಕೆ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ.

ಚೆನ್ನೈನ ಡಿಎಂಕೆ ಪ್ರಧಾನ ಕಚೇರಿಯಾದ ಅಣ್ಣಾ ಅರಿವಲಯಂ ನಲ್ಲಿ ಡಿಎಂಕೆ ಅಧ್ಯಕ್ಷ ಎಂ.ಕೆ ಸ್ಟಾಲಿನ್ ಸಮ್ಮುಖದಲ್ಲಿ ಒ. ಪನ್ನೀರ್ಸೆಲ್ವಂ ಅವರನ್ನ ಪಕ್ಷಕ್ಕೆ ಸೇರಿಸಿಕೊಳ್ಳಲಾಯಿತು. ಪನ್ನೀರ್ಸೆಲ್ವಂ ಜೊತೆಗೆ ಎಐಎಡಿಎಂಕೆ ಪಕ್ಷದ ಹಲವರು ಡಿಎಂಕೆಗೆ ಸೇರ್ಪಡೆಯಾದರು.
ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಪನ್ನೀರ್ಸೆಲ್ವಂ, ಎಐಡಿಎಂಕೆ ನಾಯಕ ಎಡಪ್ಪಾಡಿ ಕೆ ಪಳನಿಸ್ವಾಮಿ ಸರ್ವಾಧಿಕಾರಿ, ದುರಹಂಕಾರಿ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಅಖಿಲ ಭಾರತ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ ( ಪಕ್ಷಕ್ಕೆ ಗೆಲುವು ಸಿಗದ ಪರಿಸ್ಥಿತಿ ಸೃಷ್ಟಿಸಿದ್ದಾರೆ ಎಂದು ಆಕ್ರೋಶ ಹೊರಹಾಕಿದ್ದಾರೆ.
ಡಿಎಂಕೆ ಸೇರಲು ಅವಕಾಶ ನೀಡಿದ್ದಕ್ಕಾಗಿ ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಅವರಿಗೆ ಧನ್ಯವಾದ ಅರ್ಪಿಸಿದ ಅವರು, ಸ್ಟಾಲಿನ್ ಜನರಿಗೆ ಉತ್ತಮ ಆಡಳಿತ ನೀಡುತ್ತಿದ್ದಾರೆ, ಜನ ಅದನ್ನ ನೋಡ್ತಿದ್ದಾರೆ. ದ್ರಾವಿಡರ ನೀತಿ, ದ್ರಾವಿಡ ಚಳವಳಿ ಉಳಿಸುವ ನಿಟ್ಟಿನಲ್ಲಿ ಡಿಎಂಕೆ ಕೆಲಸ ಮಾಡುತ್ತಿದೆ. ಇಂತಹ ಪಕ್ಷಕ್ಕೆ ನಾನೊಬ್ಬ ಕೇಡರ್ ಆಗಿ ಸೇರಿದ್ದೇನೆ. ಸ್ಟಾಲಿನ್ ನಾಯಕತ್ವ ಒಪ್ಪಿ ನಾನು ಡಿಎಂಕೆ ಸೇರ್ಪಡೆಯಾಗಿದ್ದೇನೆ. ಪಕ್ಷವನ್ನ ಹೇಗೆ ಮುನ್ನಡೆಸಬೇಕು ಅನ್ನೋದನ್ನ ಸ್ಟಾಲಿನ್ ತೋರಿಸಿಕೊಟ್ಟಿದ್ದಾರೆ ಎಂದು ಹೇಳಿದರು.