ಬೆಂಗಳೂರು, ಆ3(Daijiworld News/RD): ಅನರ್ಹಗೊಂಡ ಶಾಸಕರ ಪೈಕಿ ಒಬ್ಬರಾದ ಅಡಗೂರು ಎಚ್. ವಿಶ್ವನಾಥ್ ನಾನು ಇನ್ನು ಮುಂದೆ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ, ರಾಜಕೀಯ ಕ್ಷೇತ್ರಕ್ಕೆ ನಿವೃತ್ತಿ ನೀಡುತ್ತಿದ್ದೇನೆ ಎಂದು ಘೋಷಿಸಿದರು.
ರಾಜ್ಯದ ರಾಜಕೀಯ ಬಿಕ್ಕಟ್ಟಿನ ಪರಿಸ್ಥಿತಿಯಿಂದ ಕಂಗೆಟ್ಟಿರುವ ಎಚ್. ವಿಶ್ವನಾಥ್ ಇನ್ನು ಮುಂದೆ ಅಸೆಂಬ್ಲಿ ಚುನಾವಣೆಗೆ ಸ್ಪರ್ಧಿಸುವುದಿಲ್ಲ, ರಾಜಕೀಯ ಚಟುವಟಿಕೆಗಳಿಗೆ ಮರಳುವುದಿಲ್ಲ ಎಂದು ಹೇಳಿದರು.
ಮೈತ್ರಿ ಸರ್ಕಾರದ ಆಡಳಿತ ಬಿರುಕುಗೊಳ್ಳಲು ಮತ್ತು ಸರ್ಕಾರ ಪತನವಾಗಲು ಸಿದ್ದರಾಮಯ್ಯ ಮತ್ತು ಎಚ್.ಡಿ. ಕುಮಾರಸ್ವಾಮಿ ಕಾರಣ, ನಾವಲ್ಲ ಎಂದರು. ಕಾಂಗ್ರೆಸ್ನಲ್ಲಿ ಸಂಸದನಾಗಿದ್ದಾಗ ಸುಳ್ಳು ಆರೋಪ ಹೊರಿಸಿ ಉಚ್ಚಾಟನೆ ಮಾಡವಂತೆ ಹೈಕಮಾಂಡ್ಗೆ ದೂರು ನೀಡಲು ಮುಂದಾಗಿದ್ದರು. ಈ ವಿಷಯವನ್ನು ಕೆ.ಸಿ. ವೇಣುಗೋಪಾಲ್ ಅವರೇ ತಿಳಿಸಿದ್ದರು. ಸಿದ್ದರಾಮಯ್ಯ ನನಗೆ ಒಂದಲ್ಲ ಒಂದು ರೀತಿಯ ಅವಮಾನ ಮಾಡುತ್ತಿದ್ದರು. ಇನ್ನು ಜೆಡಿಎಸ್ ನಲ್ಲಿ ಹೆಸರಿಗಷ್ಟೆ ಪಕ್ಷದ ರಾಜ್ಯಾಧ್ಯಕ್ಷನಾಗಿ ಕೆಲಸ ಮಾಡುತ್ತಿದ್ದೆ. ಮೈಸೂರು ಜಿಲ್ಲೆಯ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲೂ ನಾನೂ ಸೂಚಿಸಿದ ಅಭ್ಯರ್ಥಿಗೆ ಟಿಕೆಟ್ ನೀಡಲಿಲ್ಲ. ಈ ಎಲ್ಲಾ ಅನುಮಾನಗಳನ್ನು ಅನುಭವಿಸಿ ಬೇಸೆತ್ತು ರಾಜೀನಾಮೆ ನೀಡಿದೆ ಎಂದು ಸುದ್ದಿಗಾರರಲ್ಲಿ ಹೇಳಿದರು.