ಶ್ರೀನಗರ, ಆ.03(Daijiworld News/SS): ಜಮ್ಮು ಮತ್ತು ಕಾಶ್ಮೀರದಲ್ಲಿ ಮತ್ತೆ ಉಗ್ರರು ಅಟ್ಟಹಾಸ ಮೆರೆದಿದ್ದು, ಭಾರತೀಯ ಸೇನೆಯ ದಾಳಿಗೆ ಓರ್ವ ಉಗ್ರ ಹತನಾಗಿದ್ದಾನೆ ಎಂದು ತಿಳಿದುಬಂದಿದೆ.
ಕಣಿವೆ ರಾಜ್ಯ ಕಾಶ್ಮೀರದ ಸೋಪೋರ್ ಜಿಲ್ಲೆಯ ಮಲ್ಮನ್ ಪೋರಾದಲ್ಲಿ ಉಗ್ರರು ಮತ್ತು ಸೈನಿಕರ ನಡುವೆ ತೀವ್ರ ಗುಂಡಿನ ಚಕಮಕಿ ನಡೆಯುತ್ತಿದ್ದು, ಸೈನಿಕರ ಗುಂಡೇಟಿಗೆ ಓರ್ವ ಉಗ್ರ ಹತನಾಗಿದ್ದಾನೆ. ಮಲ್ಮನ್ ಪೋರಾದಲ್ಲಿ ಉಗ್ರರು ಅವಿತಿರುವ ಕುರಿತು ಮಾಹಿತಿ ಪಡೆದ ಸೈನಿಕರು ಮುಂಜಾನೆಯೇ ಪ್ರದೇಶವನ್ನು ಸುತ್ತುವರೆದರು. ಈ ವೇಳೆ ಉಗ್ರರು ಏಕಾಏಕಿ ಸೈನಿಕರತ್ತ ಗುಂಡಿನ ದಾಳಿ ನಡೆಸಿದ್ದು, ಸೈನಿಕರು ಕೂಡ ಪ್ರತಿದಾಳಿ ನಡೆಸಿದ್ದಾರೆ.
ದಾಳಿಯಲ್ಲಿ ಓರ್ವ ಯೋಧನಿಗೆ ಗುಂಡೇಟು ತಗುಲಿದ್ದು, ಗಾಯಾಳು ಸೈನಿಕನನ್ನು ಸೇನಾಸ್ಪತ್ರೆಗೆ ದಾಖಲಿಸಲಾಗಿದೆ. ಘಟನಾ ಪ್ರದೇಶದಲ್ಲಿ 3 ರಿಂದ 4 ಉಗ್ರರಿರುವ ಸಾಧ್ಯತೆ ಇದ್ದು, ಎನ್ ಕೌಂಟರ್ ಮುಂದುವರೆದಿದೆ ಎಂದು ತಿಳಿದುಬಂದಿದೆ.