ಬೆಂಗಳೂರು, ಆ3(Daijiworld News/RD): ಐಎಂಎ ವಂಚನೆ ಪ್ರಕರಣದ ತನಿಖೆ ಚುರುಕುಗೊಂಡ ಪರಿಣಾಮ ವಿಚಾರಣೆಗೆ ಸಂಬಂಧಿಸಿದಂತೆ ಎಸ್ ಐಟಿ ನೋಟಿಸ್ ನೀಡುತ್ತಿದ್ದು, ಇದರ ಭೀತಿಯಿಂದ ನನ್ನನ್ನು ಈ ಕಷ್ಟದಿಂದ ನೀವೇ ಪಾರು ಮಾಡಿ ಎಂದು ಅನರ್ಹಗೊಂಡ ಶಿವಾಜಿನಗರದ ಮಾಜಿ ಶಾಸಕ ರೋಷನ್ ಬೇಗ್ ಸಿಎಂ ಮನೆಗೆ ಭೇಟಿ ನೀಡಿ ತಮ್ಮ ದುಖಃವನ್ನು ಹಂಚಿಕೊಂಡಿದ್ದಾರೆ.
ಈಗಾಗಲೇ ಸ್ಪೀಕರ್ ನಮ್ಮನ್ನು ಅನರ್ಹಗೊಳಿಸಿದ್ದು, ಇದೀಗ ಶಿವಾಜಿನಗರ ಕ್ಷೇತ್ರದ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದೇನೆ. ಐಎಂಎ ಪ್ರಕರಣಕ್ಕೂ ನನಗೂ ಯಾವುದೇ ಸಂಬಂಧವಿಲ್ಲ, ಇದಕ್ಕೆ ಸಂಬಂಧಪಟ್ಟಂತೆ ವಿಚಾರಣೆಗೆ ಹಾಜರಾಗುವಂತೆ ಪದೇ ಪದೇ ಕರೆಸಿ ಮಾನಸಿಕ ಹಿಂಸೆ ನೀಡುತ್ತಿದ್ದಾರೆ. ಹೀಗಾಗಿ ಈ ಕಷ್ಟದಿಂದ ಮುಕ್ತಿ ನೀಡಿ ನನ್ನನ್ನು ಕಾಪಾಡಬೇಕು ಎಂದು ಸಿಎಂ ಜೊತೆ ತಮ್ಮ ದುಖಃವನ್ನು ಹೇಳಿಕೊಂಡಿದ್ದಾರೆ.
ಈಗಾಗಲೇ ಎಸ್ ಐಟಿ ವಿಚಾರಣೆ ತಪ್ಪಿಸಿಕೊಂಡು ಪುಣೆಗೆ ಹೋಗುತ್ತಿದ್ದ ರೋಷನ್ ಬೇಗ್ರನ್ನ ಎಸ್ಐಟಿ ವಿಮಾನ ನಿಲ್ದಾಣದಲ್ಲೇ ವಶಕ್ಕೆ ಪಡೆದು, ಬಳಿಕ ಬಿಡುಗಡೆ ಮಾಡಿತ್ತು. ಆ ನಂತರವೂ ಮೂರು ಬಾರಿ ನೋಟಿಸ್ ನೀಡಿ ವಿಚಾರಣೆಗೆ ಹಾಜರಾಗುವಂತೆ ರೋಷನ್ ಬೇಗ್ ಅವರನ್ನು ಕರೆದಿದೆ. ಇದೀಗ ಎಸ್ ಐಟಿ ಹೊಡೆತದಿಂದ ಕಂಗೆಟ್ಟು ಇದೀಗ ಸಿಎಂ ಯಡಿಯೂರಪ್ಪ ಮೊರೆ ಹೋಗಿದ್ದಾರೆ ಎಂದು ಹೇಳಲಾಗುತ್ತಿದೆ.