ಮುಂಬೈ,ಆ 3 (Daijiworld News/RD): ಮಹಾನಗರಿ ಮುಂಬೈನಲ್ಲಿ ಮಳೆಯ ಆರ್ಭಟ ಜೋರಾಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದ್ದು, ನಗರದ ಗೋರೆಗಾಂವ್, ಕಾಂದಿವಲಿ ದಹಿಸರ್ ಸೇರಿದಂತೆ ಪ್ರಮುಖ ಪ್ರದೇಶಗಳು ಸಂಪೂರ್ಣ ಜಲಾವೃತವಾಗಿದೆ ಎಂದು ಮೂಲಗಳು ತಿಳಿಸಿದೆ.
ಮುಂದಿನ 6 ಗಂಟೆ ಭಾರೀ ಮಳೆ ಸುರಿಯುವ ಹಿನ್ನೆಲೆ ಮನೆಯಿಂದ ಹೊರಬಾರದಂತೆ ಮುಂಬೈ ಜನರಿಗೆ ಪೊಲೀಸರು ಎಚ್ಚರಿಕೆ ನೀಡಿದ್ದಾರೆ. ಮಳೆಗೆ ಈಗಾಗಲೇ ರಸ್ತೆಯಲ್ಲಿ ನೀರು ನಿಂತಿದ್ದು, ಟ್ರಾಫಿಕ್ ಜಾಮ್ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ಅಗತ್ಯವಿದ್ದರೆ ಮಾತ್ರ ಮನೆಯಿಂದ ಹೊರಬರುವಂತೆ ಸೂಚಿಸಲಾಗಿದೆ. ಶನಿವಾರ ಮಧ್ಯಾಹ್ನವು ಮಳೆ ಮುಂದುವರಿದಿದ್ದು, ಹವಮಾನ ವೈಪರೀತ್ಯದ ಹಿನ್ನೆಲೆಯಲ್ಲಿ, ಸಮುದ್ರ ತೀರಾ ಪ್ರದೇಶದಲ್ಲಿ 4.90 ಮೀಟರ್ ನಷ್ಟು ಅಲೆಗಳ ಮೇಲೆಳುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಈ ಹಿನ್ನೆಲೆಯಲ್ಲಿ ಪ್ರವಾಸಿಗರು, ಜನಸಾಮಾನ್ಯರು ಬೀಚ್ ಗಳಿಗೆ ತೆರಳದಂತೆ ಆದೇಶ ನೀಡಿದೆ. ಮುಂಬೈ ಸೇರಿದಂತೆ ಉತ್ತರ ಕೊಂಕಣ ಪ್ರದೇಶದಲ್ಲಿ ಮಳೆ ಆರ್ಭಟ ಮುಂದುವರಿಯಲಿದೆ. ಈ ಹಿನ್ನೆಲೆಯಲ್ಲಿ ಶನಿವಾರ ಎಲ್ಲಾ ಸರಕಾರಿ ಶಾಲಾ, ಕಾಲೇಜಿಗೆ ರಜೆ ಘೋಷಿಸಲಾಗಿದೆ ಎಂದು ವರದಿ ತಿಳಿಸಿದೆ.
ಜಲಾವೃತದಿಂದಾಗಿ ರೈಲ್ವೆ ಹಳಿಗಳ ಮೇಲೆ ನೀರು ನಿಂತ ಪರಿಣಾಮವಾಗಿ ಲೋಕಲ್ ರೈಲು ಸಂಚಾರ 15 ರಿಂದ 20ನಿಮಿಷಗಳ ಕಾಲ ವಿಳಂಬವಾಯಿತು. ಈಗಾಗಲೇ ಮುಂಜಾಗ್ರತ ಕ್ರಮವಾಗಿ ರೈಲುಗಳು ಎಚ್ಚರಿಕೆಯಿಂದ ನಿಧಾನಗತಿಯಲ್ಲಿ ರೈಲು ಸಂಚಾರ ನಡೆಸಬೇಕು ಎಂದು ರೈಲ್ವೆ ವ್ಯವಹಾರಗಳ ಮುಖ್ಯ ಅಧಿಕಾರಿ ಸುನೀಲ್ ಉದಾಸಿ ಮಾಹಿತಿ ನೀಡಿದ್ದಾರೆ. ವಿಮಾನ ಸಂಚಾರ ಎಂದಿನಂತೆ ಮುಂದುವರಿದಿದ್ದು, ಈವರೆಗೂ ಯಾವುದೇ ರೀತಿಯ ವ್ಯತ್ಯಾಸ ಉಂಟಾಗಿಲ್ಲ ಎಂದು ವರದಿ ವಿವರಿಸಿದೆ.