ಛತ್ತೀಸ್ ಘಡ, ಆ 3 (Daijiworld News/MSP): ಛತ್ತೀಸ್ ಘಡದಲ್ಲಿ ಸೇನಾಪಡೆಗಳು ಮತ್ತು ನಕ್ಸಲರ ನಡುವೆ ಭೀಕರ ಕಾಳಗದಲ್ಲಿ ಕನಿಷ್ಟ 7 ಮಂದಿ ನಕ್ಸಲರು ಹತರಾಗಿದ್ದಾರೆ ಎಂದು ವರದಿಯಾಗಿದೆ.
ಇಲ್ಲಿನ ರಾಯ್ ಪುರ ರಾಜನಂದಗಾಂವ್ ನ ಸೀತಾಗೋಟಾ ಕಾಡಿನಲ್ಲಿ 40ಕ್ಕೂ ಹೆಚ್ಚಿನ ನಕ್ಸಲರು ಅಡಗಿರುವ ಕುರಿತು ಮಾಹಿತಿ ಪಡೆದ ಜಿಲ್ಲಾ ಮೀಸಲು ಪಡೆ ಯೋಧರು ಕೂಡಲೇ ಸ್ಥಳಕ್ಕೆ ಕಾರ್ಯಾಚರಣೆ ಆರಂಭಿಸಿದ್ದಾರೆ. ಈ ಸಂದರ್ಭ ನಕ್ಸಲರು ಪ್ರತಿದಾಳಿ ನಡೆಸಿದ್ದು ಈ ವೇಳೆ ಮೂವರು ಮಹಿಳೆಯರು ಸೇರಿ ಕನಿಷ್ಟ ಏಳು ನಕ್ಸಲರು ಹತರಾಗಿದ್ದಾರೆ ಎಂದು ತಿಳಿದುಬಂದಿದೆ.
ಈ ಕಾರ್ಯಾಚರಣೆ ಸುಮಾರು 2 ಗಂಟೆಗಳ ಕಾಲ ನಡೆದಿದ್ದು, ಸ್ಥಳದಲ್ಲಿ ಎಕೆ 47, 303 ರೈಫಲ್ ಸೇರಿದಂತೆ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ.
ಇಡೀ ಪ್ರದೇಶವನ್ನು ವಶಕ್ಕೆ ಪಡೆದಿರುವ ಜಿಲ್ಲಾ ಮೀಸಲು ಪಡೆ ಯೋಧರು ಸಾರ್ವಜನಿಕರಿಗೆ ನಿರ್ಬಂಧ ಹೇರಿದ್ದು, ಛತ್ತೀಸ್ ಘಡದ ಪೊಲೀಸ್ ಮಹಾ ನಿರ್ದೇಶಕ ಡಿಎಂ ಅವಸ್ಥಿ ಸುತ್ತಮುತ್ತಲಿನ ಗ್ರಾಮಸ್ಥರು ಎಚ್ಚರ ವಹಿಸುವಂತೆ ಕೋರಿದ್ದು, ನಕ್ಸಲರು ಗ್ರಾಮಗಳಿಗೆ ನುಗ್ಗುವ ಸಾಧ್ಯತೆ ಇದ್ದು, ಈ ನಿಟ್ಟಿನಲ್ಲಿ ಗ್ರಾಮದಲ್ಲಿ ತೀವ್ರ ಶೋಧ ಕಾರ್ಯಾಚರಣೆ ಆರಂಭಿಸಿದ್ದಾರೆ.