ಬೆಂಗಳೂರು, ಆ 3 (Daijiworld News/MSP): ರಾಜ್ಯದಲ್ಲಿ ಮಳೆಯ ಅಭಾವದಿಂದ ಉಂಟಾಗಿರುವ ತೀವ್ರ ಬರ ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸಲು, ಸಂಬಂಧ ಪಟ್ಟ ಇಲಾಖೆಗಳ ಎಲ್ಲ ಹಂತದ ಅಧಿಕಾರಿಗಳು ಇಲ್ಲ ಸಲ್ಲದ ನೆಪ ಹೇಳಿ ಯಾವುದೇ ಕಾರಣಕ್ಕೂ 3 ತಿಂಗಳವರೆಗೆ ರಜೆ ತೆಗೆದುಕೊಳ್ಳುವಂತಿಲ್ಲ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಸೂಚಿಸಿದ್ದಾರೆ.
ಮಳೆಯ ಅಭಾವದಿಂದ ರಾಜ್ಯದಲ್ಲಿ ಬರಗಾಲ ಪರಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಯಾವ ಅಧಿಕಾರಿಯೂ ಯಾವುದೇ ರೀತಿಯ ಸಬೂಬು ಹೇಳದೆ ಸಮರ್ಪಕವಾಗಿ ಬರ ನಿರ್ವಹಣೆಯನ್ನು ಮಾಡುವಂತೆ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಪ್ರಾದೇಶಿಕ ಆಯುಕ್ತರು, ಜಿಲ್ಲಾಧಿಕಾರಿ , ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳು, ಇಲಾಖೆಗಳ ಕಾರ್ಯದರ್ಶಿಗಳ ಸಭೆ ಬಳಿಕ ನಂತರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಸಮರ್ಪಕ ಬರ ನಿರ್ವಹಣೆ ಮಾಡುವುದು ಮೊದಲ ಆದ್ಯತೆ. ಹೀಗಾಗಿ ಎಲ್ಲಾ ಹಂತದ ಅಧಿಕಾರಿಗಳು ಸಮರೋಪಾದಿಯಲ್ಲಿ ಕೆಲಸ ಮಾಡಲು ಸೂಚಿಸಿದ್ದೇನೆ ಎಂದು ಹೇಳಿದರು.
ಒಟ್ಟಾರೆ 3 ತಿಂಗಳವರೆಗೆ ರಜೆ ಅವಧಿಯಲ್ಲಿ ರಜೆ ತೆಗೆದುಕೊಳ್ಳದೆ ಕೆಲಸ ಮಾಡಿ ಎಂದು ಹೇಳುವ ಮೂಲಕ ಮೈತ್ರಿ ಸರ್ಕಾರ ಆಡಳಿತದ ಅವಧಿಯಲ್ಲಿ ತುಕ್ಕು ಹಿಡಿದಂತಿದ್ದ ಆಡಳಿತ ಯಂತ್ರಕ್ಕೆ ಬಿಜೆಪಿ ನೇತೃತ್ವದ ಸರ್ಕಾರ ಚುರುಕು ಮುಟ್ಟಿಸುವ ಕೆಲಸ ಮಾಡಿದ್ದಾರೆ ಸಿಎಂ
ಇನ್ನು ಬರ ಪರಿಹಾರ ಕಾಮಗಾರಿಯ ವೇಳೆ ಯಾವುದೇ ಹಂತದ ಅಧಿಕಾರಿಗಳೂ ಶನಿವಾರ, ಭಾನುವಾರ ನೆಪ ಹೇಳದೇ ತೊಡಗಿಸಿಕೊಳ್ಳುವಂತೆ ಖಡಕ್ ಸೂಚನೆ ನೀಡಿದ್ದಾರೆ.