ಹೊಸದಿಲ್ಲಿ, ಆ.03(Daijiworld News/SS): ಪಾಕ್ ಆಕ್ರಮಿತ ಕಾಶ್ಮೀರದ ಉಗ್ರರ ನೆಲೆಗಳನ್ನು ಗುರಿಯಾಗಿಸಿಕೊಂಡು ಶನಿವಾರ (ಆಗಸ್ಟ್ 3, 2019) ಮಧ್ಯಾಹ್ನ 4 ಗಂಟೆ ಸುಮಾರಿಗೆ ಭಾರತ ಸೇನಾ ಯೋಧರು ದಾಳಿ ನಡೆಸಿದ್ದಾರೆ.
ಉಗ್ರರ ವಿರುದ್ಧ ಹೋರಾಟ ನಡೆಸುತ್ತಿರುವ ಭಾರತ ಸೇನಾ ಯೋಧರು ಮತ್ತೊಂದು ಸರ್ಜಿಕಲ್ ಸ್ಟ್ರೈಕ್ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಜಮ್ಮು ಕಾಶ್ಮೀರದಲ್ಲಿ ಆತಂಕದ ವಾತಾವರಣ ಮೂಡಿದೆ. ಜಮ್ಮು ಕಾಶ್ಮೀರದಲ್ಲಿ ಹೆಚ್ಚುವರಿ ಸೇನೆ ನಿಯೋಜನೆ ಮಾಡಿರುವ ಬೆನ್ನಲ್ಲೇ ಭಾರತೀಯ ಯೋಧರು ಸರ್ಜಿಕಲ್ ಸ್ಟ್ರೈಕ್ ಮಾಡಿರುವುದು ಮಹತ್ವ ಪಡೆದುಕೊಂಡಿದೆ.
ಜಮ್ಮು ಕಾಶ್ಮೀರದ ನೀಲಂ ಜೇಲಂ ಪ್ರಾಜೆಕ್ಟ್ ಬಳಿ ನಿಖರ ದಾಳಿ ನಡೆಸಲಾಗಿದೆ. ಈ ಹಿಂದೆ ನಡೆದಿದ್ದ ಎಲ್ಲಾ ದಾಳಿಗಳಿಗಿಂತಲೂ ಈ ದಾಳಿ ಭಿನ್ನವಾಗಿದೆ. ಆದರೆ ಘಟನೆಯಲ್ಲಿ ಎಷ್ಟು ಮಂದಿ ಉಗ್ರರು ಸಾವನ್ನಪ್ಪಿದ್ದಾರೆ ಎಂಬ ಮಾಹಿತಿ ಲಭಿಸಿಲ್ಲ. ನೀಲಂ ಜೇಲಂ ಪ್ರಾಜೆಕ್ಟ್ ಪಾಕಿಸ್ತಾನ ಕೈಗೊಳ್ಳುತ್ತಿರುವ ಜಲ ವಿದ್ಯುತ್ ಯೋಜನೆ ಇದಾಗಿದ್ದು, ಈ ದಾಳಿಯಿಂದ ಯೋಜನೆಗೆ ಹಾನಿಯಾಗಿದೆ ಎಂದು ಪಾಕ್ ಮಾಧ್ಯಮಗಳು ವರದಿಯನ್ನು ಮಾಡಿದೆ.
ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಉಗ್ರ ನೆಲೆಗಳನ್ನು ಗುರಿಯಾಗಿಸಿಕೊಂಡು ಭಾರತೀಯ ಯೋಧರು ದಾಳಿ ನಡೆಸಿದ್ದಾರೆ ಎಂದು ಎಂದು ತಿಳಿದುಬಂದಿದೆ. ಕ್ಲಸ್ಟರ್ ಬಾಂಬ್ಗಳ ಮೂಲಕ ದಾಳಿ ನಡೆಸಲಾಗಿದೆ. ಈ ಭಾಗದಲ್ಲಿದ್ದ ಉಗ್ರ ನೆಲೆಗಳು ಬಹುತೇಕ ನಾಶಗೊಂಡಿದೆ. ಜೈಷೆ ಮೊಹಮದ್, ಲಷ್ಕರ್ ಸೇರಿದಂತೆ ಹಲವು ಉಗ್ರ ಸಂಘಟನೆಯ ನೆಲೆಗಳು ಇಲ್ಲಿವೆ ಎಂದು ಹೇಳಲಾಗಿದೆ.