ಬೆಂಗಳೂರು, ಆ.03(Daijiworld News/SS): ಎಲ್ಲ ಧರ್ಮಗಳಲ್ಲಿ ವ್ಯಕ್ತಿಗಳು ವೈಯಕ್ತಿಕ ಶುದ್ಧತೆ ಕಾಯ್ದುಕೊಳ್ಳಬೇಕು ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಹೇಳಿದ್ದಾರೆ.
ರಾಜೀವ್ಗಾಂಧಿ ಆರೋಗ್ಯ ವಿಶ್ವವಿದ್ಯಾಲಯದಲ್ಲಿ ಆಯೋಜಿಸಿದ್ದ ವಿಶ್ವ ಹೋಮಿಯೋಪತಿ ದಿನಾಚರಣೆ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಯಾವುದೇ ವೈದ್ಯ ಪದ್ಧತಿ, ಧಾರ್ಮಿಕ ಆಚರಣೆ ಇರಲಿ ಎಲ್ಲವೂ ನಂಬಿಕೆಯನ್ನಾಧರಿಸಿವೆ. ಎಲ್ಲ ಧರ್ಮಗಳಲ್ಲಿ ವ್ಯಕ್ತಿಗಳು ವೈಯಕ್ತಿಕ ಶುದ್ಧತೆ ಕಾಯ್ದುಕೊಳ್ಳಬೇಕು. ಧರ್ಮದ ನಿಯಮಗಳ ಬಳಕೆಗೆ ದೇಹವನ್ನು ಸಾಧನವನ್ನಾಗಿ ಬಳಸಿಕೊಂಡಾಗ ಮಾತ್ರ ದೇಹದ ಎಲ್ಲ ನಡವಳಿಕೆಗಳು ಸರಿಯಾದ ದಿಕ್ಕಿನಲ್ಲಿ ಸಾಗಲು ಸಾಧ್ಯ ಎಂದು ಹೇಳಿದರು.
ಆಸೆ ಈಡೇರಿಸಿಕೊಳ್ಳಲು ಧರ್ಮದ ಮಾರ್ಗ ಮೀರಿದರೆ ರೋಗಗಳನ್ನು ಆಹ್ವಾನಿಸಿಕೊಂಡಂತೆ. ಕಾಲ ಯಾವುದೇ ಇರಲಿ ಶರೀರವನ್ನು ಬಳಸಿಕೊಳ್ಳುವಲ್ಲಿ ಸಂಸ್ಕಾರವಿರಬೇಕು. ಆಧುನಿಕ ಜೀವನಶೈಲಿ ಆರೋಗ್ಯ ಸಮಸ್ಯೆಗಳಿಗೆ ಮೂಲ ಕಾರಣವಾಗಿದ್ದು, ನಾವು ಆರಿಸಿಕೊಳ್ಳುವ ಮಾರ್ಗಗಳು ಸರಿಯಾಗಿರಬೇಕು ಎಂದು ತಿಳಿಸಿದರು.
ಆಧುನಿಕ ಕಾಲದಲ್ಲಿ ಮನಸ್ಸು-ದೇಹಕ್ಕೆ ವಿಶ್ರಾಂತಿ ಇಲ್ಲದೆ ದುಡಿಯುವ ಮನಃಸ್ಥಿತಿ ಆರಂಭವಾಗಿದೆ. ಧಾರ್ಮಿಕ ಆಚರಣೆಗಳು ಕಡೆಗಣಿಸಲ್ಪಡುತ್ತಿದೆ. ಅರ್ಥ ಧರ್ಮವನ್ನು ಮೀರಬಾರದು. ಅರ್ಥಕ್ಕೆ ಮಿತಿ ಇರಬೇಕು ಎಂದ ಅವರು, ಆಧುನಿಕ ಜೀವನ ಶೈಲಿಯಲ್ಲಿ ಧರ್ಮದ ಸ್ಥಾನವನ್ನು ಅರ್ಥ ಆಕ್ರಮಿಸಿದೆ ಎಂದು ನುಡಿದರು.
ಕಾಯಿಲೆಗಳ ಕುರಿತಂತೆ ಅಹಂಕಾರ, ಆಲಸ್ಯ, ತಿರಸ್ಕಾರ ಒಳ್ಳೆಯದಲ್ಲ. ವ್ಯಸನ ಮುಕ್ತ ಜೀವನ ದೇಶೀಯ ಪದ್ಧತಿ ಆಹಾರ ಹಾಗೂ ಸನ್ಮಾರ್ಗದ ನಡವಳಿಕೆಗಳು ಮನುಷ್ಯನ ಉತ್ತಮ ಆರೋಗ್ಯಕ್ಕೆ ಸಹಕಾರಿ. ಆರೋಗ್ಯ ಕಳೆದುಕೊಂಡವನು ಎಲ್ಲವನ್ನೂ ಕಳೆದುಕೊಂಡ ಹಾಗೆ. ಪ್ರತಿ ಔಷಧಿ ಸೇವನೆಯಿಂದ ಕಾಯಿಲೆಗಳು ತೀವ್ರತೆ ಪಡೆದುಕೊಳ್ಳುತ್ತದೆ ಎಂದು ಹೇಳಿದರು.