ಹಾಸನ, ಆ.03(Daijiworld News/SS): ನಾನು ರಾಜಕೀಯಕ್ಕೆ ಬಂದಿದ್ದು ಬಡ ಕುಟುಂಬಗಳಿಗಾಗಿ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಭಾವನಾತ್ಮಕವಾಗಿ ಮಾತನಾಡಿದರು.
ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ನನಗೆ ಅಧಿಕಾರಕ್ಕಿಂತ ನಿಮ್ಮ ಪ್ರೀತಿ ಮುಖ್ಯ. ನಿಮಗೆಂದೂ ನಾನು ದ್ರೋಹ ಮಾಡಿಲ್ಲ. ನಾನು ಸಂಪಾದಿಸಿದ ಭೂಮಿಯಲ್ಲಿ ವೃದ್ಧಾಶ್ರಮ ನಿರ್ಮಾಣಕ್ಕೆ ನಿರ್ಧಾರ ಮಾಡಿದ್ದೇನೆ. ಕೇತೋಗಾನಹಳ್ಳಿ ಭೂಮಿಯಲ್ಲಿ ವೃದ್ಧಾಶ್ರಮ ನಿರ್ಮಾಣ ಮಾಡಿ, ವೃದ್ಧರ ಜತೆ ಬದುಕಲು ಚಿಂತಿಸಿದ್ದೇನೆ ಎಂದು ಹೇಳಿದರು.
ಲೋಕಸಭಾ ಚುನಾವಣೆಗೆ ನಿಲ್ಲಬೇಡ ಎಂದು ನನ್ನ ಮಗನಿಗೆ ಹೇಳಿದ್ದೆ. ಜಿಲ್ಲೆಯ ಶಾಸಕರು ಒತ್ತಾಯ ಹಾಕಿ ನಿಲ್ಲಿಸಿದರು. ಆದರೆ, ನನನ್ನು ಹಾಗೂ ನನ್ನ ಮಗನನ್ನು ಮಾಧ್ಯಮಗಳು ಪ್ರತಿನಿತ್ಯ ಖಳನಾಯಕರನ್ನಾಗಿ ಬಿಂಬಿಸಿದವು. ನಾನು ಮುಖ್ಯಮಂತ್ರಿಯಾದ ದಿನದಿಂದ ಸರ್ಕಾರ ತೆಗೆಯಲು ಮಾಧ್ಯಮಗಳು ಮುಂದಾದವು ಎಂದು ಬೇಸರ ವ್ಯಕ್ತಪಡಿಸಿದರು.
ನಾನು ರಾಜಕೀಯ ಮಾಡಿದ್ದು ಬಡ ಕುಟುಂಬಗಳಿಗಾಗಿ. ಯಡಿಯೂರಪ್ಪ ರೀತಿ ಜೈಲಿಗೋಗಲು ರಾಜಕೀಯ ಮಾಡಿಲ್ಲ. ನಿಮ್ಮ ಯಡಿಯೂರಪ್ಪನೂ ಬರಲ್ಲ, ಸಿದ್ದರಾಮಯ್ಯನೂ ಬರಲ್ಲ. ಬಡ ಕುಟುಂಬಗಳ ನೆರವಿಗೆ ನನ್ನ ಬಿಟ್ಟು ಬೇರೆ ಯಾರೂ ಬರಲ್ಲ ಎಂದು ಹೇಳಿದರು.
ರಾಜಕೀಯದಿಂದ ಇಷ್ಟೊತ್ತಿಗೆ ನಿವೃತ್ತಿ ಘೋಷಿಸುತ್ತಿದ್ದೆ. ಲಕ್ಷಾಂತರ ಕಾರ್ಯಕರ್ತರಿಗಾಗಿ ಇನ್ನೂ ಇದ್ದೀನಿ. ನನಗೆ ದೇವೇಗೌಡರ ರೀತಿ ಇಳಿ ವಯಸ್ಸಿನಲ್ಲೂ ರಾಜಕೀಯ ಮಾಡುವ ಹಂಗಿಲ್ಲ. ಇನ್ಮುಂದೆ ಮೈತ್ರಿ ಮಾಡಿಕೊಳ್ಳಲ್ಲ, ಯಾರ ಜತೆಗೂ ಮೈತ್ರಿ ಮಾಡಿಕೊಳ್ಳಲ್ಲ ಎಂದು ತಿಳಿಸಿದರು.