ಉತ್ತರಕರ್ನಾಟಕ, ಆ4(Daijiworld News/RD): ಕಳೆದ ದಿನಗಳಿಂದ ವರುಣನ ಆರ್ಭಟ ಜೋರಾಗಿದ್ದು, ಉತ್ತರ ಕರ್ನಾಟಕ ಜಿಲ್ಲೆಯ ನದಿಗಳು ಮೈತುಂಬಿ ಹರಿಯುತ್ತಿದ್ದು, ಬಾಗಲಕೋಟೆ, ಚಿಕ್ಕೋಡಿ, ಬೆಳಗಾವಿಯಲ್ಲಿ ಹೈ ಅಲರ್ಟ್ ಘೋಷಣೆ ಮಾಡಿದ್ದು, ಜಿಲ್ಲೆಯಲ್ಲಿ ಪ್ರವಾಹದ ಭೀತಿ ಎದುರಾಗಿದೆ.
ಈ ಬಾರಿ ಉತ್ತರ ಕರ್ನಾಟಕ ಜಿಲ್ಲೆಗಳಲ್ಲಿ ವಿಪರೀತ ಮಳೆಯಾಗುತ್ತಿದ್ದು, ನದಿಗಳಲ್ಲ ನೀರಿನ ಮಟ್ಟ ಹೆಚ್ಚಾಗುತ್ತಿದೆ. ಕೃಷ್ಣಾ ನದಿ ತೀರದ ಜಿಲ್ಲೆಗಳಲ್ಲಿ ಪ್ರವಾಹ ಉಂಟಾಗಿರುವುದರಿಂದ ಜನ ಜೀವನ ಅಸ್ತವ್ಯಸ್ತಗೊಂಡಿದೆ. ಈಗಾಗಲೆ ಮಹರಾಷ್ಟ್ರದ ಹಲವು ನಗರಗಳು ಜಲಾವೃತಗೊಂಡಿದ್ದು, ನಿನ್ನೆ ಭಾರೀ ಮಳೆಯ ಹಿನ್ನೆಲೆಯಲ್ಲಿ ಮನೆಯಿಂದ ಯಾರು ಹೊರಗಡೆ ಭಾರದಂತೆ ಪೊಲೀಸ್ ಇಲಾಖೆ ಆದೇಶ ನೀಡಿದೆ.
ಮಹಾರಾಷ್ಟ್ರದ ಸಾತಾರಾ ಜಿಲ್ಲೆಯ ಪಾಟಣ ತಾಲೂಕಿನ ಕೊಯ್ನಾ ಡ್ಯಾಂ ನಲ್ಲಿ 90.46 ಟಿಎಂಸಿ ನೀರು ಸಂಗ್ರಹವಾಗಿದ್ದು, ಈ ಡ್ಯಾಂ 105 ಟಿಎಂಸಿ ನೀರು ಸಂಗ್ರಹಣಾ ಸಾಮರ್ಥ್ಯ ಹೊಂದಿದೆ. ಹಾಗಾಗಿ ಕೊಯ್ನಾ ಡ್ಯಾಂನಿಂದ ಇದೀಗ 19,580 ಕ್ಯೂಸೆಕ್ ನೀರು ಹೊರಬಿಡಲಾಗಿದೆ. ನಿನ್ನೆಯಿಂದ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಒಂದೇ ದಿನದಲ್ಲಿ ಮೂರು ಭಾರಿ ಕೊಯ್ನಾ ಡ್ಯಾಂನಿಂದ ನೀರು ಬಿಡುಗಡೆ ಮಾಡಲಾಗುತ್ತಿದೆ. ಪ್ರತೀ ನಿಮಿಷಕ್ಕೂ ಕೃಷ್ಣಾ ನದಿಯ ನೀರಿನ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ.
ಕೃಷ್ಣಾ ನದಿ ತೀರದ ಬೆಳಗಾವಿ, ಬಾಗಲಕೋಟ, ವಿಜಯಪುರ, ರಾಯಚೂರು, ಯಾದಗಿರಿ ಜಿಲ್ಲೆಯಲ್ಲಿ ಪ್ರವಾಹ ಭೀತಿ ಎದುರಾಗಿದ್ದು, ಹೀಗಾಗಿ, ಮುಂಜಾಗೃತ ಕ್ರಮವಾಗಿ ಕೃಷ್ಣಾ ನದಿಯ ಸುತ್ತಮುತ್ತ ತುರ್ತು ಸ್ಥಿತಿಯಲ್ಲಿ ಜನರನ್ನು ರಕ್ಷಿಸಲು ಎನ್ ಡಿಆರ್ ಎಫ್ 30 ಜನರು ಹಾಗೂ 2 ಬೋಟುಗಳ ವ್ಯವಸ್ಥೆ ಮಾಡಲಾಗಿದೆ.