ನವದೆಹಲಿ,ಆ 4 (Daijiworld News/RD): ಕೆರನ್ ಸೆಕ್ಟರ್ನಲ್ಲಿ ಗಡಿಯ ಒಳಗೆ ನುಸುಳಲು ಸಂಚು ಹೂಡುತ್ತಿದ್ದ ಪಾಕಿಸ್ತಾನದ ಬಾರ್ಡರ್ ಆಕ್ಷನ್ ಟೀಮ್ ಬ್ಯಾಟ್ ಯೋಧರು ಸೇರಿ ಐದರಿಂದ ಏಳು ಉಗ್ರರನ್ನು ಭಾರತೀಯ ಸೇನೆ ಸದೆಬಡಿದಿದ್ದು, ಇದೀಗ ಪಾಕಿಸ್ಥಾನಕ್ಕೆ ಉಗ್ರರ ಶವ ಬೇಕಾದರೆ ಶ್ವೇತ ಧ್ವಜವನ್ನು ತಂದು ಶವವನ್ನು ಕೊಂಡೊಯ್ಯಲಿ ಎಂದು ಭಾರತೀಯ ಸೇನೆ ಖಡಕ್ ಆಗಿ ತಿಳಿಸಿದೆ.
ಜಮ್ಮು-ಕಾಶ್ಮೀರದಲ್ಲಿ ಉಗ್ರರ ನುಸುಳುವಿಕೆ ಹೆಚ್ಚಾಗುತ್ತಿದ್ದು, ಹಿಂಸಾಚಾರ ತೀವ್ರಗೊಳ್ಳುತ್ತಿದ್ದು, ಇದಕ್ಕಾಗಿ ಹೆಚ್ಚುವರಿ ಭದ್ರತಾ ಪಡೆಗಳ ಆಯೋಜಿಸಿದ್ದು ಮತ್ತು ತೀವ್ರ ಕಟ್ಟೆಚರದ ಕ್ರಮವನ್ನು ಕೈಗೊಳ್ಳಲಾಯಿತು. ಹೀಗಾಗಿ ಭಾರತದೊಳಗೆ ನುಸುಳಲು ಮುಂದಾಗಿದ್ದ ಪಾಕಿನ ಉಗ್ರರನ್ನು ಭಾರತೀಯ ಸೇನೆ ಶನಿವಾರ ಹತ್ತಿಕ್ಕುವ ಮೂಲಕ ಯಶಸ್ವಿಯಾಯಿತು.
ಈಗಾಗಲೇ ಸೇನೆ ಹೊಡೆದುರುಳಿಸಿದ ಪಾಕಿಸ್ತಾನದ ಉಗ್ರರಲ್ಲಿ ಅಲ್ಲಿನ ಕಮಾಂಡರುಗಳು ಇದ್ದು, ಇವರು ಕಠಿಣ ತರಬೇತಿ ಪಡೆದಿರುತ್ತಾರೆ. ಇವರು ಭಾರತದ ಯೋಧರಿರುವ ಸ್ಥಳವನ್ನು ಪತ್ತೆ ಹಚ್ಚಿ, ಅಲ್ಲಿಗೆ ರಾತ್ರಿ ಸಮಯದಲ್ಲಿ ದಾಳಿ ನಡೆಸಿ, ಯೋಧರ ಶವಗಳನ್ನು ಕ್ರೂರವಾಗಿ ಹಿಂಸಿಸಿ ವಿರೂಪಗೊಳಿಸುತ್ತಾರೆ.
ಶನಿವಾರ ಇದೇ ರೀತಿಯಲ್ಲಿ ಗಡಿಯಲ್ಲಿ ನುಸುಳಲು ಪ್ರಯತ್ನಿಸಿದ ಪಾಕ್ ಉಗ್ರರನ್ನು ಭಾರತೀಯ ಸೇನೆ ಹೊಡೆದುರುಳಿತು. ಭಾರತೀಯ ಭದ್ರತಾ ಪಡೆಗಳ ಮೇಲೆ ಸರಣಿ ದಾಳಿ ನಡೆಸಲು ಜೈಷೆ ಉಗ್ರರು ಸಂಚು ರೂಪಿಸಿದ್ದು, ಗಡಿ ನುಸುಳಲು ಕಾದು ಕುಳಿತಿದ್ದ ವಿಚಾರ ಗುಪ್ತಚರ ಇಲಾಖೆ ತಿಳಿಸುವ ಮೊದಲೇ ಈ ಕಾರ್ಯಾಚರಣೆ ಮಾಡಿ ಸೇನೆ ಯಶಸ್ವಿಯಾಗಿದೆ.
ಇದೀಗ ಗಡಿ ರೇಖೆಯಲ್ಲಿ ಪಾಕ್ ಯೋಧರ ಹಾಗೂ ಉಗ್ರರ ಶವ ಚೆಲ್ಲಪಿಲ್ಲಿಯಾಗಿ ಬಿದ್ದಿದ್ದು, ಶ್ವೇತ ಧ್ವಜ ತೋರಿಸಿ ಆ ನಂತರ ಶವಗಳನ್ನು ತಗೊಂಡು ಹೋಗಿ ಎಂದು ಭಾರತ, ಪಾಕಿಸ್ತಾನಕ್ಕೆ ಸಂದೇಶ ರವಾನಿಸಿದೆ. ಆದರೆ ಈ ಸಂದೇಶಕ್ಕೆ ಪಾಕಿಸ್ತಾನದಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ಸೇನೆ ತಿಳಿಸಿದೆ.