ಬೆಂಗಳೂರು,ಆ 4 (Daijiworld News/RD): ಜುಲೈ 22 ರಂದು ಚಂದ್ರಯಾನ-೨ ಉಪಗ್ರಹವನ್ನು ಹೊತ್ತ ಬಾಹುಬಲಿ ರಾಕೆಟ್ ನಭಕ್ಕೆ ಚಿಮ್ಮಿದ್ದು, ಈಗಾಗಲೇ ಯಶಸ್ವಿಯಾಗಿ ಕಾರ್ಯಾಚರಣೆಯನ್ನು ಪೂರ್ಣಗೊಳಿಸುತ್ತಿದೆ. ಇದೀಗ ಭೂಮಿಯ ಮೇಲ್ಭಾಗದ ಚಿತ್ರಣವನ್ನು ಚಂದ್ರಯಾನ - 2 ನೌಕೆಯ ಕ್ಯಾಮೆರಾ ಸೆರೆ ಹಿಡಿದಿದ್ದು, ಭೂಮಿಯ ಈ ಫೋಟೋಗಳನ್ನು ಕಳುಹಿಸಿದೆ. ವಿಕ್ರಮ್ ಲ್ಯಾಂಡರ್ ಎಲ್ಐ4 ಕ್ಯಾಮೆರಾದ ಮೂಲಕ ಭೂಮಿಯ ಈ ದೃಶ್ಯಗಳನ್ನು ಸೆರೆ ಹಿಡಿದಿದೆ.
ಚಂದ್ರಯಾನ - 2 ಆಗಸ್ಟ್ 14 ರಂದು ಕಕ್ಷೆ ಸೇರಲಿದ್ದು, ಆಗಸ್ಟ್ 20 ರ ವೇಳೆಗೆ ಚಂದ್ರನನ್ನು ತಲುಪಲಿದ್ದು, ಸೆಪ್ಟೆಂಬರ್ 2 ರಂದು ಚಂದ್ರನ ಮೇಲೆ ಇಳಿಯಲಿದೆ ಎಂದು ಈಗಾಗಲೇ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಹೇಳಿದೆ. ಭೂಮಿಯ ಚಿತ್ರವನ್ನು ಪಡೆಯುವ ಮೂಲಕ ಮತ್ತೊಮ್ಮೆ ಯಶಸ್ವಿ ಪಯಣದತ್ತ ಇಸ್ರೋ ಸಾಗಿದೆ. ಈಗಾಗಲೇ ನೌಕೆಯು ಕಕ್ಷೆಯನ್ನು 4ನೇ ಬಾರಿಗೆ ಎತ್ತರಿಸುವ ಕಾರ್ಯ ಯಶಸ್ವಿಯಾಗಿದೆ. ಒಟ್ಟು 15 ಬಾರಿ ಚಂದ್ರಯಾನ - 2 ನೌಕೆ ಎತ್ತರಿಸುವ ಕಾರ್ಯ ನಡೆಯಲಿದೆ.