ಗುವಾಹಟಿ,,ಮಾ. 12 (DaijiworldNews/AK): ರೈತರಿಗೆಂದು ಕೇಂದ್ರ ಸರ್ಕಾರ ರೂಪಿಸಿರುವ ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಲ್ಲಿ 22ನೇ ಕಂತಿನ ಹಣ ಇಂದು ಶುಕ್ರವಾರ ಬಿಡುಗಡೆಯಾಗುತ್ತಿದೆ.

ಅಸ್ಸಾಮ್ ರಾಜಧಾನಿಯಲ್ಲಿ ನಡೆಯುವ ಕಾರ್ಯಕ್ರಮದ ವೇಳೆ ಪ್ರಧಾನಿಗಳು ಹಣ ಬಿಡುಗಡೆ ಮಾಡಲಿದ್ದಾರೆ. 9 ಕೋಟಿಗೂ ಅಧಿಕ ರೈತರ ಬ್ಯಾಂಕ್ ಖಾತೆಗಳಿಗೆ ತಲಾ 2,000 ರೂ ಹಣ ನೇರವಾಗಿ ಜಮೆಯಾಗಲಿದೆ.
ಕಳೆದ ಮೂರು ತಿಂಗಳಲ್ಲಿ ಸರ್ಕಾರ ಪಿಎಂ ಕಿಸಾನ್ ಯೋಜನೆಯ ಫಲಾನುಭವಿಗಳಿಗೆ ಮರು-ಕೆವೈಸಿ ಮಾಡಲು ತಿಳಿಸಿತ್ತು. ಕೆವೈಸಿ ಅಪ್ಡೇಟ್ ಮಾಡಲು ಮೂರ್ನಾಲ್ಕು ಮಾರ್ಗಗಳ ಆಫರ್ ಕೊಡಲಾಗಿತ್ತು. ಸಮೀಪದ ರೈತ ಸಂಪರ್ಕ ಕೇಂದ್ರ, ಪಿಎಂ ಕಿಸಾನ್ ಮೊಬೈಲ್ ಆ್ಯಪ್, ಪಿಎಂ ಕಿಸಾನ್ ವೆಬ್ಸೈಟ್ನಲ್ಲಿ ಕೆವೈಸಿ ಅಪ್ಡೇಟ್ ಮಾಡಬಹುದು. ಪಿಎಂ ಕಿಸಾನ್ ಯೋಜನೆಗೆ ನೊಂದಾಯಿಸಿದ್ದು, ಈ ಹಿಂದೆ ಎಲ್ಲಾ ಕಂತುಗಳನ್ನು ಪಡೆದಿರುವ ಫಲಾನುಭವಿಗಳು ರೀ-ಕೆವೈಸಿ ಮಾಡದೇ ಇದ್ದರೆ 22ನೇ ಕಂತಿನ ಹಣ ಸಿಗುವುದಿಲ್ಲ. ವರದಿಗಳ ಪ್ರಕಾರ, ಈ ಬಾರಿ 22ನೇ ಕಂತಿನ ಹಣದಿಂದ ವಂಚಿತರಾಗುವ ಫಲಾನುಭವಿಗಳ ಸಂಖ್ಯೆ ಹಲವು ಲಕ್ಷಗಳೆನ್ನಲಾಗಿದೆ.
ಇಕೆವೈಸಿ ಅಪ್ಡೇಟ್ ಮಾಡದಿದ್ದವರಿಗೆ ಪಿಎಂ ಕಿಸಾನ್ ಹಣ ಸಿಕ್ಕೋದಿಲ್ಲ. ಫಲಾನುಭವಿಗಳ ಕುಟುಂಬದಲ್ಲಿ ಯಾರಾದರೂ ಕೂಡ ಸರ್ಕಾರಿ ಅಧಿಕಾರಿಯೋ, ಶಾಸಕರೋ, ಸಂಸದರೋ, ಜಿಪಂ ಸದಸ್ಯರೋ, ವೃತ್ತಿಪರರೋ, ಐಟಿ ಪಾವತಿದಾರರೋ ಇದ್ದರೆ ಅಂಥವರು ರೈತರಾಗಿದ್ದಾಗ್ಯೂ ಯೋಜನೆಗೆ ಅರ್ಹರಿರುವುದಿಲ್ಲ.
ಮತ್ತೊಂದು ಗಮನಾರ್ಹ ಸಂಗತಿ ಎಂದರೆ 2019ರ ಫೆಬ್ರುವರಿ 1ರ ನಂತರ ಜಮೀನು ಮಾಲಕತ್ವ ಪಡೆದ ರೈತರಿಗೆ ಪಿಎಂ ಕಿಸಾನ್ ಹಣ ಸಿಕ್ಕೋದಿಲ್ಲ. ಒಂದೇ ಕುಟುಂಬದ ಇಬ್ಬರು ಸದಸ್ಯರು ಪ್ರತ್ಯೇಕ ಜಮೀನು ಮಾಲಕತ್ವ ಹೊಂದಿದ್ದರೂ ಒಬ್ಬರು ಮಾತ್ರವೇ ಯೋಜನೆಗೆ ಅರ್ಹರಾಗಿರುವುದು. ಪಿಎಂ ಕಿಸಾನ್ ಯೋಜನೆಯ ಅಧಿಕೃತ ವೆಬ್ಸೈಟ್ ಲಿಂಕ್: pmkisan.gov.in/