ಬೆಂಗಳೂರು, ಆ 4 (Daijiworld News/RD): ವರುಣನ ಆರ್ಭಟ ಮತ್ತೆ ಜೋರಾಗಿದೆ. ಇದರಿಂದಾಗಿ ಜಲಾಶಯಗಳಲ್ಲಿ ನೀರಿನ ಮಟ್ಟ ಏರಿಕೆಯಾಗುತ್ತಿದ್ದು, ಉತ್ತರ ಕರ್ನಾಟಕದ ಹಲವು ಕಡೆ ಈಗಾಗಲೇ ಹೈ ಅಲರ್ಟ್ ಘೋಷಣೆ ಮಾಡಿದ್ದು, ಪ್ರವಾಹದ ಸ್ಥಿತಿ ನಿರ್ಮಾಣವಾಗಿದೆ. ಈ ಹಿನ್ನೆಲೆಯಲ್ಲಿ ಸಿಎಂ ಬಿ.ಎಸ್ ಯಡಿಯೂರಪ್ಪ ಪ್ರವಾಹ ಪೀಡಿತ ಜಿಲ್ಲೆಯ ಅಧಿಕಾರಿಗಳ ಜೊತೆ ವಿಡಿಯೋ ಕಾನ್ಫರೆನ್ಸ್ ಮಾಡುವ ಮೂಲಕ ಸಮಾಲೋಚನೆ ನಡೆಸಿ ಪ್ರವಾಹದಿಂದ ಉಂಟಾದ ಸಮಸ್ಯೆಗಳಿಗೆ ಕೂಡಲೇ ಸ್ಪಂದಿಸಿ ಕ್ರಮ ಕೈಗೊಳ್ಳಬೇಕು ಎಂದಿದ್ದಾರೆ.
ವೈಮಾನಿಕ ಸಮೀಕ್ಷೆಗೂ ಮುನ್ನ ಮಾಹಿತಿ ಸಂಗ್ರಹಿಸಿದ ಬಿಎಸ್ವೈ, ಉತ್ತರ ಕರ್ನಾಟಕದ 5 ಜಿಲ್ಲೆಗಳಾದ ವಿಜಯಪುರ, ಬಾಗಲಕೋಟೆ, ಬೆಳಗಾವಿ, ರಾಯಚೂರು, ಯಾದಗಿರಿ ಜಿಲ್ಲಾಧಿಕಾರಿಗಳ ಜೊತೆ ತುರ್ತು ವಿಡಿಯೋ ಸಂವಾದ ನಡೆಸಿದ್ದಾರೆ. ಪ್ರವಾಹ ಯಾವ ಪ್ರದೇಶಗಳಲ್ಲಿ ಉಂಟಾಗಿದೆ, ಎಷ್ಟು ಪ್ರದೇಶ ಮುಳುಗಡೆ ಆಗಿದೆ. ಅಲ್ಲಿನ ಜನರ ಪರಿಸ್ಥಿತಿ ಹೇಗಿದೆ, ಮಳೆಯಿಂದ ಆದ ಹಾನಿಯ ಬಗ್ಗೆ ಸವಿಸ್ಥಾರವಾಗಿ ಮಾಹಿತಿಯನ್ನು ಅಧಿಕಾರಿಗಳಿಂದ ಪಡೆದುಕೊಂಡಿದ್ದಾರೆ. ಜೊತೆಗೆ ಈವರೆಗೆ ಅಧಿಕಾರಿಗಳು ಕೈಗೊಂಡ ಕ್ರಮಗಳ ಕುರಿತು ಕೇಳಿದ್ದಾರೆ. ಅಧಿಕಾರಿಗಳು ಜನರ ಕಷ್ಟಕ್ಕೆ ಸ್ಪಂದಿಸದೆ ಹೋದರೆ ಅವರ ಮೇಲೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಖಡಕ್ ಆಗಿ ತಿಳಿಸಿದ್ದಾರೆ.
ಸಂತ್ರಸ್ತರಿಗೆ ತಕ್ಷಣ ಗಂಜಿಕೇಂದ್ರ ಸ್ಥಾಪಿಸಲು ಜಿಲ್ಲಾಧಿಕಾರಿಗಳಿಗೆ ಬಿಎಸ್ವೈ ಸೂಚನೆ ನೀಡಿದ್ದು, ಗಂಜಿಕೇಂದ್ರದಲ್ಲಿ ಕೇವಲ ಗಂಜಿ ನೀಡದ ಉತ್ತಮ ಗುಣಮಟ್ಟದ ಆಹಾರ ನೀಡಲು ಸಿಎಂ ಸೂಚಿಸಿದ್ದಾರೆ. ಜಲಾವೃತಗೊಂಡ ಪ್ರದೇಶಗಳ ಜನರ ರಕ್ಷಣೆಗೆ ಕ್ರಮ ಕೈಗೊಳ್ಳುವಂತೆ ಹಾಗೂ ನೆರೆ ಪೀಡಿತ ಪ್ರದೇಶಗಳಲ್ಲಿ ಜನರನ್ನು ಬೇರೆ ಪ್ರದೇಶಗಳಿಗೆ ಸ್ಥಳಾಂತರಿಸಿ ಮೂಲಸೌಕರ್ಯ ಒದಗಿಸಿಕೊಡಬೇಕೆಂದು ಆದೇಶ ನೀಡಿದ್ದಾರೆ. ಪ್ರವಾಹದಿಂದ ಉಂಟಾದ ಹಾನಿಯ ಕುರಿತಾದ ಸಂಪೂರ್ಣ ಮಾಹಿತಿಯನ್ನು ಕಳುಹಿಸಬೇಕು ಎಂದು ಸಿಎಂ ಸೂಚಿಸಿದ್ದಾರೆ.
ಪ್ರವಾಹಪೀಡಿತ ಪ್ರದೇಶಗಳಿಗೆ ನಾಳೆ ಬೆಳಿಗ್ಗೆ ಸಿಎಂ ಬಿ.ಎಸ್.ಯಡಿಯೂರಪ್ಪ ವೈಮಾನಿಕ ಸಮೀಕ್ಷೆ ನಡೆಸಲಿದ್ದಾರೆ ಎಂದು ವರದಿಗಳು ತಿಳಿಸಿವೆ.