ಚೆನ್ನೈ, ಮಾ. 14 (DaijiworldNews/AA): ಕೇಂದ್ರ ಲೋಕ ಸೇವಾ ಆಯೋಗ (ಯುಪಿಎಸ್ಸಿ) 2025ನೇ ಸಾಲಿನ ನಾಗರಿಕ ಸೇವೆಗಳ ಪರೀಕ್ಷೆಯ ಫಲಿತಾಂಶವನ್ನು ಪ್ರಕಟಿಸಿದೆ. ತಮ್ಮ ಐದನೇ ಪ್ರಯತ್ನದಲ್ಲಿ ಯುಪಿಎಸ್ಸಿ ಪರೀಕ್ಷೆಯಲ್ಲಿ ರಾಜೇಶ್ವರಿ ಸುವೆ ಅವರು ದೇಶಕ್ಕೆ ದ್ವಿತೀಯ ರ್ಯಾಂಕ್ ಗಳಿಸಿದ್ದಾರೆ.

ರಾಜೇಶ್ವರಿ ಅವರು ಮಧುರೈ ಜಿಲ್ಲೆಯ ವಾಡಿಪಟ್ಟಿಯ ನಿವಾಸಿ. ರಾಜೇಶ್ವರಿ ಅವರ ತಂದೆ ಉದ್ಯಮಿಯಾಗಿದ್ದು, ತಾಯಿ ಗಣಿತಶಾಸ್ತ್ರದ ಅಸೋಸಿಯೇಟ್ ಪ್ರೊಫೆಸರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ರಾಜೇಶ್ವರಿ ಅವರು 2018 ರಲ್ಲಿ ವೇಲ್ ಟೆಕ್ ಇಂಜಿನಿಯರಿಂಗ್ ಕಾಲೇಜಿನಿಂದ ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ ಪದವಿ ಪಡೆದಿದ್ದಾರೆ.
ತಮಿಳುನಾಡು ಸರ್ಕಾರದ ನಾನು ಮುದಲ್ವನ್ ಯೋಜನೆ ಹಾಗೂ ಖಾಸಗಿ ತರಬೇತಿ ಸಂಸ್ಥೆಗಳು ರಾಜೇಶ್ವರಿ ಅವರಿಗೆ ಬೆಂಬಲ ನೀಡಿದೆ. 2024 ರಲ್ಲಿ ಈ ಯೋಜನೆಯಡಿ 10 ತಿಂಗಳ ಕಾಲ ಮಾಸಿಕ 7,500 ರೂ. ಹಣಕಾಸಿನ ನೆರವು ಪಡೆದರು. ಪ್ರಿಲಿಮ್ಸ್ ಉತ್ತೀರ್ಣರಾದ ನಂತರ ಮೇನ್ಸ್ ಪರೀಕ್ಷೆಗೆ 25,000 ರೂ. ಮತ್ತು ಸಂದರ್ಶನದ ಸಿದ್ಧತೆಗಾಗಿ 50,000 ರೂ. ಪ್ರೋತ್ಸಾಹಧನ ಲಭಿಸಿದೆ.
ಪರೀಕ್ಷೆಯ ಸಿದ್ಧತೆಗಾಗಿ ರಾಜೇಶ್ವರಿ ಅವರು ಕಳೆದ ಕೆಲವು ವರ್ಷಗಳಿಂದ ಕುಟುಂಬದ ಯಾವುದೇ ಕಾರ್ಯಕ್ರಮಗಳಿಗೆ ಹಬ್ಬಗಳಲ್ಲಿ ಭಾಗವಹಿಸುತ್ತಿರಲಿಲ್ಲ. 2025ರಲ್ಲಿ ಐದನೇ ಬಾರಿಗೆ ಯುಪಿಎಸ್ಸಿ ಪರೀಕ್ಷೆ ಬರೆದ ಅವರು ಎರಡನೇ ರ್ಯಾಂಕ್ ನೊಂದಿಗೆ ಉತ್ತೀರ್ಣರಾಗಿದ್ದಾರೆ. ಈ ಮೂಲಕ ಅವರ ಹಲವು ವರ್ಷಗಳ ತ್ಯಾಗಕ್ಕೆ ತಕ್ಕ ಪ್ರತಿಫಲ ದೊರೆತಿದೆ.
ರಾಜೇಶ್ವರಿ ಅವರು ಈಗಾಗಲೇ 2024 ರಲ್ಲಿ ತಮಿಳುನಾಡು ಗ್ರೂಪ್-1 ಪರೀಕ್ಷೆಯಲ್ಲಿ ತೇರ್ಗಡೆಯಾಗಿ, ದಿಂಡಿಗಲ್ನಲ್ಲಿ ಡೆಪ್ಯುಟಿ ಡಿಸ್ಟ್ರಿಕ್ಟ್ ಕಲೆಕ್ಟರ್ ಆಗಿ ತರಬೇತಿ ಪಡೆದಿದ್ದಾರೆ. ಪ್ರಸ್ತುತ ಅವರು ಚೆನ್ನೈನ ಸಚಿವಾಲಯದಲ್ಲಿ ತರಬೇತಿ ಪಡೆಯುತ್ತಿದ್ದಾರೆ.