ನವದೆಹಲಿ, ಮಾ. 14 (DaijiworldNews/TA): ಭಾರತೀಯ ನೌಕಾಪಡೆಯ ಕಠಿಣ ಭದ್ರತಾ ಬೆಂಗಾವಲಿನೊಂದಿಗೆ 40,000 ಮೆಟ್ರಿಕ್ ಟನ್ಗಳಿಗಿಂತ ಹೆಚ್ಚು ದ್ರವೀಕೃತ ಪೆಟ್ರೋಲಿಯಂ ಅನಿಲ ಹೊತ್ತ ಭಾರತೀಯ ಹಡಗು ಶಿವಾಲಿಕ್ ಹಾರ್ಮುಜ್ ಜಲಸಂಧಿಯನ್ನು ಯಶಸ್ವಿಯಾಗಿ ದಾಟಿದೆ.

ಇರಾನ್ ನಿಯಂತ್ರಣದಲ್ಲಿರುವ ಹಾರ್ಮುಜ್ ಜಲಸಂಧಿಯಲ್ಲಿ ಭದ್ರತಾ ಪರಿಸ್ಥಿತಿ ತೀವ್ರವಾಗಿರುವ ಹಿನ್ನೆಲೆಯಲ್ಲಿ ಭಾರತೀಯ ನೌಕಾಪಡೆಯ ರಕ್ಷಣೆಯೊಂದಿಗೆ ಈ ಹಡಗು ಸಂಚರಿಸಿದೆ. ಜಲಸಂಧಿ ದಾಟಿದ ಬಳಿಕ ಹಡಗು ಮುಕ್ತ ಸಮುದ್ರದತ್ತ ಯಶಸ್ವಿಯಾಗಿ ಸಾಗಿದ್ದು, ಮುಂದಿನ ಎರಡು ದಿನಗಳೊಳಗೆ ಮುಂಬೈ ಅಥವಾ ಕಾಂಡ್ಲಾ ಬಂದರಿಗೆ ತಲುಪುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಇದಕ್ಕೂ ಮಧ್ಯೆ LPG ಸಾಗಣೆ ಮಾಡುತ್ತಿರುವ ಮತ್ತೊಂದು ಭಾರತೀಯ ಹಡಗು ಕೂಡ ಇಂದು ನೌಕಾಪಡೆಯ ಬೆಂಗಾವಲಿನಲ್ಲಿ ಹಾರ್ಮುಜ್ ಜಲಸಂಧಿಯ ಮೂಲಕ ಹಾದುಹೋಗುವ ನಿರೀಕ್ಷೆಯಿದೆ. ಭಾರತೀಯ ಧ್ವಜ ಹೊಂದಿರುವ ಹಡಗುಗಳ ಸಂಚಾರಕ್ಕೆ ಹಾರ್ಮುಜ್ ಜಲಸಂಧಿಯನ್ನು ತೆರೆಯುವಂತೆ ಭಾರತ ಇರಾನ್ಗೆ ಮನವಿ ಮಾಡಿತ್ತು. ಈ ಮನವಿಗೆ ಸ್ಪಂದಿಸಿದ ಇರಾನ್, ಭಾರತೀಯ ಹಡಗುಗಳ ಸಂಚಾರಕ್ಕೆ ಅನುಮತಿ ನೀಡಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಭಾರತೀಯ ಹಡಗುಗಳು ಇದೇ ಮಾರ್ಗದ ಮೂಲಕ ದೇಶಕ್ಕೆ ಆಗಮಿಸುವ ಸಾಧ್ಯತೆ ಇದೆ.
ಸರ್ಕಾರಿ ಮೂಲಗಳ ಪ್ರಕಾರ, ಅಧಿಕಾರಿಗಳು ಹಡಗುಗಳ ಚಲನವಲನವನ್ನು ನಿಕಟವಾಗಿ ಗಮನಿಸುತ್ತಿದ್ದು, ಭಾರತೀಯ ಹಡಗುಗಳು ಅಪಾಯದ ವಲಯದಿಂದ ಸಂಪೂರ್ಣ ಸುರಕ್ಷಿತವಾಗಿ ಹೊರಬರುವವರೆಗೆ ನೌಕಾಪಡೆಯ ಬೆಂಗಾವಲು ಮುಂದುವರಿಯಲಿದೆ.
ಹಾರ್ಮುಜ್ ಜಲಸಂಧಿ ವಿಶ್ವದ ಪ್ರಮುಖ ಸಮುದ್ರ ಮಾರ್ಗಗಳಲ್ಲಿ ಒಂದಾಗಿದ್ದು, ಜಾಗತಿಕ ತೈಲ ಮತ್ತು ಅನಿಲ ಸಾಗಣೆಯ ಸುಮಾರು 20 ಶೇಕಡಾ ಇದೇ ಮಾರ್ಗದ ಮೂಲಕ ಸಾಗುತ್ತದೆ. ಇದಕ್ಕೆ ಮಧ್ಯೆ, ಅಮೆರಿಕ, ಇಸ್ರೇಲ್ ಹಾಗೂ ಈ ದೇಶಗಳಿಗೆ ಬೆಂಬಲ ನೀಡುವ ರಾಷ್ಟ್ರಗಳ ಹಡಗುಗಳು ಹಾರ್ಮುಜ್ ಜಲಸಂಧಿಗೆ ಪ್ರವೇಶಿಸಿದರೆ ಅವುಗಳನ್ನು ದಾಳಿ ಮಾಡುವುದಾಗಿ ಇರಾನ್ ಎಚ್ಚರಿಕೆ ನೀಡಿದೆ. ಸದ್ಯ ಭಾರತ ಸೇರಿದಂತೆ ರಷ್ಯಾ, ಚೀನಾ, ಟರ್ಕಿ ಮತ್ತು ಪಾಕಿಸ್ತಾನದ ಕಂಟೈನರ್ ಹಡಗುಗಳ ಸಂಚಾರಕ್ಕೆ ಮಾತ್ರ ಅನುಮತಿ ನೀಡಲಾಗಿದೆ.