ಮುಂಬೈ, ಮಾ. 14 (DaijiworldNews/TA): ಪಾತ್ರೆಯೊಳಗಿದ್ದ ಬೇಯಿಸಿದ ಮೀನು ಕಾಣೆಯಾಗಿದ್ದ ವಿಚಾರಕ್ಕೆ ಸಂಬಂಧಿಸಿ ಇಬ್ಬರು ಸ್ನೇಹಿತರು ಸೇರಿ ಮತ್ತೊಬ್ಬ ಸ್ನೇಹಿತನನ್ನು ಕಲ್ಲಿನಿಂದ ಹೊಡೆದು ಕೊಲೆ ಮಾಡಿರುವ ಘಟನೆ ಮುಂಬೈನಲ್ಲಿ ನಡೆದಿದೆ.

ಪೊಲೀಸರ ಮಾಹಿತಿ ಪ್ರಕಾರ, ಫೆಬ್ರವರಿ 24ರಂದು ಮುಂಬೈನ ಗೋರೆಗಾಂವ್ ಪ್ರದೇಶದಲ್ಲಿರುವ ಮನೆಯಲ್ಲಿ ಈ ಘಟನೆ ನಡೆದಿದೆ. ಮೃತ ವ್ಯಕ್ತಿಯನ್ನು ಅಫ್ಸರ್ ಎಂದು ಗುರುತಿಸಲಾಗಿದೆ. ಆತನ ಸ್ನೇಹಿತರಾದ ಸುರೇಶ್ ಮತ್ತು ರಾಜೇಶ್ ರಮೇಶ್ನಾಥ್ ಅಲಿಯಾಸ್ ನೇಪಾಳಿ ಜೊತೆಗೂಡಿ ಅವರು ಮನೆಯಲ್ಲಿ ಮೀನು ಅಡುಗೆ ಮಾಡಿದ್ದರು. ಈ ವೇಳೆ ಮೂವರು ಮದ್ಯಪಾನ ಮಾಡಿದ್ದು, ಬಳಿಕ ನಿದ್ರೆಗೆ ಜಾರಿದ್ದರು.
ಸ್ವಲ್ಪ ಸಮಯದ ನಂತರ ಇಲಿಗಳು ಪಾತ್ರೆಯಲ್ಲಿದ್ದ ಬೇಯಿಸಿದ ಮೀನನ್ನು ತಿಂದಿದ್ದರಿಂದ ಪಾತ್ರೆ ಖಾಲಿಯಾಗಿತ್ತು. ನಂತರ ಎದ್ದ ಸುರೇಶ್ ಮತ್ತು ರಾಜೇಶ್ ಪಾತ್ರೆಯಲ್ಲಿ ಮೀನು ಇಲ್ಲದಿರುವುದನ್ನು ಗಮನಿಸಿ, ಅದನ್ನು ಅಫ್ಸರ್ ತಿಂದಿದ್ದಾನೆ ಎಂದು ಅನುಮಾನಿಸಿದ್ದಾರೆ. ಈ ವಿಷಯವಾಗಿ ಮೂವರ ನಡುವೆ ವಾಗ್ವಾದ ಉಂಟಾಗಿ ಜಗಳಕ್ಕೆ ತಿರುಗಿದೆ.
ಕೋಪದ ಭರದಲ್ಲಿ ಸುರೇಶ್ ಮತ್ತು ರಾಜೇಶ್ ಅಫ್ಸರ್ ಮೇಲೆ ಕಲ್ಲಿನಿಂದ ದಾಳಿ ನಡೆಸಿದ್ದು, ಗಂಭೀರವಾಗಿ ಗಾಯಗೊಂಡ ಅಫ್ಸರ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಘಟನೆ ನಂತರ ಇಬ್ಬರು ಆರೋಪಿಗಳು ಸ್ಥಳದಿಂದ ಪರಾರಿಯಾಗಿ ಹರಿಯಾಣದತ್ತ ತೆರಳಿದ್ದರು. ಈ ಕುರಿತು ವನ್ರೈ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದ್ದು, ಆರೋಪಿಗಳನ್ನು ಬಂಧಿಸಲು ಪೊಲೀಸರು ಶೋಧ ಆರಂಭಿಸಿದ್ದರು.
ತನಿಖೆ ವೇಳೆ ಪ್ರದೇಶದಲ್ಲಿದ್ದ ಸುಮಾರು 50 ಕಸ ಸಂಗ್ರಹಕರನ್ನು ವಿಚಾರಣೆ ನಡೆಸಿದ ಬಳಿಕ ಪೊಲೀಸರು ಆರೋಪಿಗಳನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾದರು. ಸುರೇಶ್ ಹರಿಯಾಣದ ಕೈತಾಲ್ನಲ್ಲಿ ಪತ್ತೆಯಾಗಿದ್ದು, ರಾಜೇಶ್ನ್ನು ರೈಲ್ವೆ ನಿಲ್ದಾಣದಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಮೃತ ಅಫ್ಸರ್ ಹಾಗೂ ಇಬ್ಬರು ಆರೋಪಿಗಳು ಸ್ಕ್ರ್ಯಾಪ್ ವ್ಯಾಪಾರದಲ್ಲಿ ತೊಡಗಿಸಿಕೊಂಡಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ರಾಜೇಶ್ ಈ ಹಿಂದೆ ಕೊಲೆ ಮತ್ತು ಸುಲಿಗೆ ಸೇರಿದಂತೆ ಹಲವು ಗಂಭೀರ ಅಪರಾಧಗಳಲ್ಲಿ ಭಾಗಿಯಾಗಿದ್ದಾನೆ ಎಂಬುದೂ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಪ್ರಕರಣದ ಕುರಿತು ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.