ನವದೆಹಲಿ, ಮಾ. 14 (DaijiworldNews/TA): ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದ ಪರಿಣಾಮ ದೇಶದಲ್ಲಿ ದ್ರವೀಕೃತ ಪೆಟ್ರೋಲಿಯಂ ಗ್ಯಾಸ್ ಸಿಲಿಂಡರ್ ಕೊರತೆ ಉಂಟಾಗಿದೆ ಎಂಬ ಆತಂಕದ ನಡುವೆ ರಾಜಧಾನಿ ದೆಹಲಿಯಲ್ಲಿ ಕಟ್ಟುನಿಟ್ಟಿನ ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಇದರ ಭಾಗವಾಗಿ ದೆಹಲಿ ಪೊಲೀಸ್ ಸಿಬ್ಬಂದಿಯ ರಜೆಯನ್ನು ತಾತ್ಕಾಲಿಕವಾಗಿ ರದ್ದುಗೊಳಿಸಿ ತಕ್ಷಣದಿಂದ ಜಾರಿಗೆ ಬರುವಂತೆ ಆದೇಶಿಸಲಾಗಿದೆ.

ರಾಜಧಾನಿಯಾದ್ಯಂತ ಇರುವ ಎಲ್.ಪಿ.ಜಿ ಸಿಲಿಂಡರ್ ಗೋಡೌನ್ಗಳು, ಅಂಗಡಿಗಳು, ರೀಫಿಲ್ಲಿಂಗ್ ಸ್ಟೇಷನ್ಗಳು ಹಾಗೂ ಗೋದಾಮುಗಳ ಹೊರಗೆ 24 ಗಂಟೆಗಳ ಭದ್ರತೆ ನಿಯೋಜಿಸಲು ಸೂಚಿಸಲಾಗಿದೆ. ಎಲ್.ಪಿ.ಜಿ ಪೂರೈಕೆ ವೇಳೆ ಯಾವುದೇ ಅಡಚಣೆ ಉಂಟಾಗದಂತೆ ನೋಡಿಕೊಳ್ಳಲು ಈ ಕ್ರಮ ಕೈಗೊಳ್ಳಲಾಗಿದೆ.
ಹಿರಿಯ ಪೊಲೀಸ್ ಅಧಿಕಾರಿಗಳ ಪ್ರಕಾರ, ಎಲ್.ಪಿ.ಜಿ ಗೋಡೌನ್ಗಳು ಮತ್ತು ರೀಫಿಲ್ಲಿಂಗ್ ಕೇಂದ್ರಗಳ ಸುತ್ತಮುತ್ತ ಭದ್ರತೆಯನ್ನು ಬಲಪಡಿಸುವಂತೆ ಭಾರತದ ಗೃಹ ಸಚಿವಾಲಯ ನೀಡಿದ ಸೂಚನೆಗಳ ಆಧಾರದ ಮೇಲೆ ಈ ನಿರ್ದೇಶನಗಳನ್ನು ಜಾರಿಗೊಳಿಸಲಾಗಿದೆ. ರಾಷ್ಟ್ರ ರಾಜಧಾನಿಯಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ.
ಇನ್ನು ಮುಂದಿನ ಆದೇಶದವರೆಗೆ ಯಾವುದೇ ಸಿಬ್ಬಂದಿಗೆ ಸಾಮಾನ್ಯ ರಜೆ ನೀಡಬಾರದು ಎಂದು ಸೂಚಿಸಲಾಗಿದೆ. ತುರ್ತು ಪರಿಸ್ಥಿತಿಯಲ್ಲಿ ಮಾತ್ರ ಮಂಜೂರಾತಿ ಪ್ರಾಧಿಕಾರದ ಪರಿಶೀಲನೆಯ ಬಳಿಕ ರಜೆ ನೀಡಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಇದಲ್ಲದೆ ಎಲ್.ಪಿ.ಜಿ ಸಿಲಿಂಡರ್ಗಳ ಕಾಳಸಂತೆ ತಡೆಯುವಂತೆ ಕೂಡ ಪೊಲೀಸರಿಗೆ ಸೂಚನೆ ನೀಡಲಾಗಿದೆ. ಯಾವುದೇ ರೀತಿಯಲ್ಲಿ ಕಾಳಸಂತೆಯಲ್ಲಿ ಎಲ್.ಪಿ.ಜಿ ಸಿಲಿಂಡರ್ ಮಾರಾಟವಾಗದಂತೆ ಕಟ್ಟುನಿಟ್ಟಾಗಿ ಗಮನ ಹರಿಸಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳು ತಿಳಿಸಿದ್ದಾರೆ.