ಬೆಂಗಳೂರು, ಮಾ. 15 (DaijiworldNews/AA): ಎಲ್ಪಿಜಿ ಅಭಾವವನ್ನು ನೀಗಿಸಲು ಹೊರದೇಶದಿಂದ ಅನಿಲ ಪೂರೈಕೆಯಂತಹ ಪರ್ಯಾಯ ಮಾರ್ಗಕ್ಕೆ ಒತ್ತಾಯಿಸಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿರುವುದಾಗಿ ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.

ಇಂದು ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಎಲ್ಪಿಜಿ ಪೂರೈಕೆಯಲ್ಲಿ ವ್ಯತ್ಯಯವಾಗಿರುವ ಬಗ್ಗೆ ಪತ್ರಕರ್ತರ ಪ್ರಶ್ನೆಗೆ ಉತ್ತರಿಸುತ್ತಾ, ವಿಧಾನಮಂಡಲದಲ್ಲಿ ಸರ್ಕಾರದ ವತಿಯಿಂದ ಈ ಬಗ್ಗೆ ಈಗಾಗಲೇ ಉತ್ತರ ನೀಡಲಾಗಿದೆ. ಆಹಾರಕ್ಕಾಗಿ ಹೋಟೆಲ್ಗಳ ಮೇಲೆ ಅವಲಂಬಿತರಾಗುವ ಜನಸಂಖ್ಯೆ ಸಾಕಷ್ಟಿದೆ. ಹೋಟೆಲ್ ವ್ಯವಸ್ಥೆ ಸ್ಥಗಿತಗೊಂಡರೆ, ಜನಜೀವನ ಅಸ್ತವ್ಯಸ್ಥವಾಗುತ್ತದೆ. ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿಯವರು ಎಲ್ಪಿಜಿ ಪೂರೈಕೆಯಲ್ಲಿ ತೊಂದರೆಯಾಗದಂತೆ ನಿರ್ವಹಿಸುವ ಬಗ್ಗೆ ಭರವಸೆ ನೀಡಿದ್ದಾರೆ" ಎಂದು ಹೇಳಿದರು.
"ಕರ್ನಾಟಕದಲ್ಲಿ ಮಾತ್ರ ಎಲ್ಪಿಜಿ ಪೂರೈಕೆ ದೊಡ್ಡ ಸಮಸ್ಯೆಯಾಗಿದೆ ಎಂದು ಬಿಜೆಪಿಯ ನಾಯಕರು ಟೀಕಿಸುತ್ತಿರುವುದಕ್ಕೆ ಪ್ರತಿಕ್ರಿಯೆ ನೀಡಿ, ರಾಜ್ಯ ಬಿಜೆಪಿಯವರು ಮಾತನಾಡುವ ಬದಲು ಎಲ್ಪಿಜಿ ಹೆಚ್ಚಿನ ಸರಬರಾಜಿಗೆ ಕ್ರಮ ವಹಿಸಲಿ" ಎಂದರು.