ನವದೆಹಲಿ, ಮಾ. 15 (DaijiworldNews/AA): ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್ಹೆಚ್ಎಐ), 2026-27ನೇ ಹಣಕಾಸು ವರ್ಷಕ್ಕೆ ಅನ್ವಯವಾಗುವಂತೆ ಫಾಸ್ಟ್ಟ್ಯಾಗ್ ವಾರ್ಷಿಕ ಪಾಸ್ ದರವನ್ನು 3,000 ರೂಪಾಯಿಗಳಿಂದ 3,075 ರೂಪಾಯಿಗಳಿಗೆ ಪರಿಷ್ಕರಿಸಿದೆ.

ರಾಷ್ಟ್ರೀಯ ಹೆದ್ದಾರಿಗಳ ಶುಲ್ಕ ನಿಯಮಗಳು, 2008ರ ಅನ್ವಯ ಈ ಬದಲಾವಣೆ ಮಾಡಲಾಗಿದ್ದು, ಹೊಸ ದರ ಏಪ್ರಿಲ್ 1 ರಿಂದ ಜಾರಿಗೆ ಬರಲಿದೆ. ದೇಶಾದ್ಯಂತ ಇರುವ ಸುಮಾರು 1,150 ಟೋಲ್ ಪ್ಲಾಜಾಗಳಲ್ಲಿ ಈ ಸೌಲಭ್ಯ ಲಭ್ಯವಿದೆ.
ಈ ವಾರ್ಷಿಕ ಪಾಸ್ ವ್ಯವಸ್ಥೆಯು ಒಂದು ವರ್ಷದ ಅವಧಿಗೆ ಅಥವಾ 200 ಬಾರಿ ಟೋಲ್ ದಾಟುವವರೆಗೆ ಮಾನ್ಯತೆ ಹೊಂದಿರುತ್ತದೆ. ಆಸಕ್ತರು 'ರಾಜ್ಮಾರ್ಗ್ ಯಾತ್ರಾ' ಆಪ್ ಅಥವಾ ಪ್ರಾಧಿಕಾರದ ಅಧಿಕೃತ ಜಾಲತಾಣದ ಮೂಲಕ ಶುಲ್ಕ ಪಾವತಿಸಿ ಕೇವಲ 2 ಗಂಟೆಗಳಲ್ಲಿ ಈ ಸೌಲಭ್ಯ ಸಕ್ರಿಯಗೊಳಿಸಿಕೊಳ್ಳಬಹುದಾಗಿದೆ.
2025 ಆಗಸ್ಟ್ 15ರಂದು ಆರಂಭವಾದ ಈ ಸೌಲಭ್ಯ ರಾಷ್ಟ್ರೀಯ ಹೆದ್ದಾರಿ ಬಳಕೆದಾರರಿಗೆ ಅತ್ಯಂತ ಸುಗಮ ಆಯ್ಕೆಯಾಗಿದೆ. ಸುಮಾರು 56 ಲಕ್ಷಕ್ಕೂ ಅಧಿಕ ಬಳಕೆದಾರರು ಇದರ ಪ್ರಯೋಜನ ಪಡೆಯುತ್ತಿದ್ದಾರೆ.