ಬೆಳಗಾವಿ, ಆ 04 (DaijiworldNews/SM): ಮಹಾರಾಷ್ಟ್ರದಲ್ಲಿ ಸುರಿದ ಭಾರೀ ಮಳೆಯಿಂದಾಗಿ ವಿವಿಧ ಜಲಾಶಯಗಳು ತುಂಬಿದ್ದು, ಬೆಳಗಾವಿ ಜಿಲ್ಲೆಗೆ ಸುಮಾರು ಎರಡೂವರೆ ಲಕ್ಷ ಕ್ಯೂಸೆಕ್ ನೀರು ಹರಿದು ಬರುತ್ತಿದೆ.
ಜೊತೆಗೆ, ನಗರದಲ್ಲಿ ಜಿಲ್ಲೆಯಲ್ಲಿ ಭಾರೀ ಮಳೆಯಾಗುತ್ತಿದೆ. ಇದರಿಂದಾಗಿ ಉತ್ತರ ಕರ್ನಾಟಕದಲ್ಲಿ ಪ್ರವಾಹ ಎದುರಾಗಿದೆ. ಕೃಷ್ಣ ಹಾಗೂ ಅದರ ಉಪ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ಪ್ರವಾಹ ಪರಿಸ್ಥಿತಿ ಉಂಟಾಗಿದೆ.
ರವಿವಾರ ಸಂಜೆ ಖಾನಾಪುರ ತಾಲೂಕಿನ ಲೋಂಡಾ ಸಮೀಪ ರೈಲ್ವೆ ಟ್ರ್ಯಾಕ್ ನಲ್ಲಿ ಮಣ್ಣು ಕುಸಿದಿದೆ. ಇದರಿಂದಾಗಿ ರೈಲ್ವೆ ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಯಿತು. ರೈಲ್ವೇ ಅಧಿಕಾರಿಗಳು ,ಇಂಜಿನಿಯರ್ ಗಳು ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದ್ದಾರೆ.
ಅಲ್ಲದೆ, ಬೆಳಗಾವಿಯ ಚಿಕ್ಕೋಡಿ ತಾಲೂಕಿನ ಸದಲಗಾ ದತ್ತವಾಡ ರಸ್ತೆಯಲ್ಲೂ ಭೂಕುಸಿತ ಉಂಟಾಗಿದೆ. ಪರಿಣಾಮ ವಾಹನ ಸಂಚಾರಕ್ಕೆ ಅಡ್ಡಿಯಾಗಿದೆ. ಕುಸಿತಗೊಂಡ ರಸ್ತೆಯಲ್ಲಿ ವಾಹನ ಸಂಚಾರವನ್ನು ನಿಲ್ಲಿಸಲಾಗಿದೆ. ಇವುಗಳನ್ನು ಹೊರತುಪಡಿಸಿ ನಿರಂತರವಾಗಿ ಸುರಿದ ಮಳೆಯಿಂದಾಗಿ ಹಲವು ಕಡೆಗಳಲ್ಲಿ ಭೂ ಕುಸಿತದ ಭೀತಿ ಎದುರಾಗಿದೆ.