ಅಹಮದಾಬಾದ್, ಮಾ. 16 (DaijiworldNews/AA): 45,000 ಮೆಟ್ರಿಕ್ ಟನ್ ಎಲ್ಪಿಜಿ ಹೊತ್ತ ಶಿವಾಲಿಕ್ ಹಡಗು ಗುಜರಾತ್ನ ಮುಂದ್ರಾ ಬಂದರಿಗೆ ಬಂದು ತಲುಪಲಿದ್ದು, ಈ ಮೂಲಕ ಗ್ಯಾಸ್ ಸಮಸ್ಯೆಗೆ ಕೊಂಚ ರಿಲೀಫ್ ಸಿಗಲಿದೆ.

ಸುಮಾರು 92,700 ಮೆಟ್ರಿಕ್ ಟನ್ ಎಲ್ಪಿಜಿ ಹೊತ್ತ ನಂದಾ ದೇವಿ ಮತ್ತು ಶಿವಾಲಿಕ್ ಎಂಬ ಎರಡು ಹಡಗುಗಳು ಹಾರ್ಮುಜ್ ಜಲಸಂಧಿಯನ್ನು ದಾಟಿ ಭಾರತಕ್ಕೆ ಬರುತ್ತಿವೆ. ಶಿವಾಲಿಕ್ ಮಾರ್ಚ್ 16 ರಂದು ಮತ್ತು ನಂದಾ ದೇವಿ ಮಾರ್ಚ್ 17 ರಂದು ಆಗಮಿಸುವ ನಿರೀಕ್ಷೆಯಿದೆ ಎಂದು ಬಂದರು, ಹಡಗು ಮತ್ತು ಜಲಮಾರ್ಗಗಳ ಸಚಿವಾಲಯ ಈ ಬಗ್ಗೆ ಮಾಹಿತಿ ನೀಡಿತ್ತು. ಇದೀಗ ನಿರೀಕ್ಷೆಯಂತೆ ಸೋಮವಾರ ಶಿವಾಲಿಕ್ ಹಡಗು ಭಾರತವನ್ನ ತಲುಪಿದೆ.
ಅಮೆರಿಕ -ಇರಾನ್ ಯುದ್ಧದಿಂದ ಅಡುಗೆ ಅನಿಲ ಪೂರೈಕೆಯಲ್ಲಿ ಉಂಟಾದ ವ್ಯತ್ಯಯ ಹಲವಾರು ವಲಯಗಳ ಮೇಲೆ ಪರಿಣಾಮ ಬೀರುತ್ತಿದೆ. ರೆಸ್ಟೋರೆಂಟ್ಗಳು, ಹಾಸ್ಟೆಲ್ಗಳು ಮತ್ತು ಕೆಲವು ಕಂಪನಿಗಳು, ಮನೆಗಳು ಮತ್ತು ಹೋಟೆಲ್ಗಳಲ್ಲಿ ಭಾರೀ ಸಮಸ್ಯೆ ಎದುರಾಗಿದೆ. ಎಲ್ಪಿಜಿ ಸರಬರಾಜಲ್ಲಿ ವಿಳಂಬವಾದರೆ ಮತ್ತಷ್ಟು ಸೇವೆಗಳ ಮೇಲೆ ಪರಿಣಾಮ ಬೀರಬಹುದು. ಮತ್ತೊಂದು ಹಡಗು ನಂದಾ ದೇವಿ ಮಾರ್ಚ್ 17 ರಂದು ಕಾಂಡ್ಲಾ ಬಂದರು ತಲುಪಲಿದೆ.